ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ನಡೆಸಿದ ದ್ವಿತೀಯ ಬಿಕಾಂ ಪರೀಕ್ಷೆಯ ಪ್ರಶ್ನೆಯ ಪತ್ರಿಕೆ ಬಯಲು ಪ್ರಕರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಭಾಗಿಯಾಗಿದ್ದಾರೆಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿರುವ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಇದರ ಹಿಂದೆ ರಾಜಕೀಯ ಕೈವಾಡ ಇದೆ ಎಂದು ದೂರಿದ್ದಾರೆ.ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ ನೇತೃತ್ವದ ದೊಂಬರಾಟ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಆರೋಪಿಗಳು ದೂರು ದಾಖಲಾದ ನಂತರ ನಾಪತ್ತೆಯಾಗಿದ್ದಾರೆ. ಹಾಗಾದರೆ ಆರೋಪಿಗಳು ಎಲ್ಲಿ?ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಸಿಕ್ಕಿಬಿದ್ದಿರುವ ಆರೋಪಿಗಳು ನಾಪತ್ತೆಯಾಗಿರುವುದು ಅನೇಕ ಸಂಶಯಕ್ಕೆ ಕಾರಣವಾಗಿದೆ. ವೇವಾ ಕಾಲೇಜನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದರ ಸಮಗ್ರ ತನಿಖೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. ಡಿ.ಕೆ.ಶಿವಕುಮಾರ್ ವಿರುದ್ಧ ಮಾನನಷ್ಟ ದೂರು: ಡಿ ಕೆ ಶಿವಕುಮಾರ್ ಅವರು ಹುರುಳಿಲ್ಲದ ಆರೋಪಗಳನ್ನು ಮಾಡಿದ್ದಲ್ಲದೇ ಸಂಘಟನೆಯ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ಎಬಿವಿಪಿ ದೂರಿದೆ.ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ತಮ್ಮೇಶಗೌಡ ತಿಳಿಸಿದ್ದಾರೆ. ವಿದ್ಯಾರ್ಥಿ ಕಾಂಗ್ರೆಸ್ ಶನಿವಾರ ನಡೆಸಿದ ಆಪರೇಷನ್ ವಿದ್ಯಾರ್ಥಿ ಕಾರ್ಯಾಚರಣೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಕಾರ್ಯಾಚರಣೆಯಲ್ಲಿ ಸಿಕ್ಕವರು ಎಂದು ಹೇಳಲಾದ ಉಪನ್ಯಾಸಕ ಮಂಜುನಾಥ ಮತ್ತು ಕಾರ್ಯದರ್ಶಿ ಇಲ್ಲಿಯವರೆಗೂ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಅವರಿಬ್ಬರನ್ನೂ ಎನ್ಎನ್ ಯುಐ ಪೊಲೀಸರ ವಶಕ್ಕೆ ಏಕೆ ಒಪ್ಪಿಸಲಿಲ್ಲ. ಇದನ್ನೆಲ್ಲ ನೋಡಿದರೆ ಇದೊಂದು ರಾಜಕೀಯ ಪ್ರೇರಿತ ಎಂಬುದು ಖಾತರಿಯಾಗುತ್ತಿದೆ ಎಂದು ತಿಳಿಸಿದ್ದಾರೆ. |