'ಒಳಚರಂಡಿ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ'ಅಧ್ಯಕ್ಷಗಾದಿಯಿಂದ ವಜಾಗೊಂಡಿರುವ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಸೋಮವಾರ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ.
ಇಂದು ಬೆಳಿಗ್ಗೆ ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ತೆರಳಿ ವರ್ತೂರ್ ಪ್ರಕಾಶ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ವಚನಭ್ರಷ್ಟ ಸರ್ಕಾರ, ಮುಂದಿನ ಒಂದು ತಿಂಗಳೊಳಗೆ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ವಚನಭ್ರಷ್ಟ ಸರ್ಕಾರದ ವಿರುದ್ಧ ಜೂನ್ 29ರಂದು ಹಾವೇರಿಯಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲಾಗುವುದು. ಅಲ್ಲದೇ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 'ನೀವೇ ಕಾದು ನೋಡಿ ಮುಂದಿನ ಅಮಾವಾಸ್ಯೆಯೊಳಗೆ ಬಿಜೆಪಿ ಸರ್ಕಾರ ಪತನ'ವಾಗಲಿದೆ ಎಂದು ಹೇಳಿದರು.
ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ಬಿಜೆಪಿಗೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ವರ್ತೂರ್ ಪ್ರಕಾಶ್ ಬೆಂಬಲ ನೀಡಿದ್ದರು. ಆದರೆ ಆರಂಭದಿಂದಲೂ ವಿವಾದಿತ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಇರಿಸುಮುರಿಸು ತಂದಿದ್ದರು. ಅಲ್ಲದೇ ತಮ್ಮ ನಾಯಕ ಸಿದ್ದರಾಮಯ್ಯನವರೇ ಹೊರತು ಯಡಿಯೂರಪ್ಪ ಅಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು.
ರಾಜ್ಯ ಸರ್ಕಾರದ ಕೃಪಾಕಟಾಕ್ಷದಿಂದ ಒಳಚರಂಡಿ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿದ್ದ ವರ್ತೂರ್ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕಾರ್ಯನಿರ್ವಹಿಸಿದ್ದಾರೆಂಬ ಆರೋಪದ ಮೇಲೆ ವಜಾಗೊಳಿಸಲಾಗಿತ್ತು. ಇದೀಗ ಸರ್ಕಾರದ ವಿರುದ್ಧ ಕಿಡಿಕಾರಿರುವ ವರ್ತೂರ್, ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. |