ಬಲವಾಗಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಎರಡು ತೆಪ್ಪಗಳು ಮುಳುಗಿದ್ದರಿಂದ 10 ಮಂದಿ ನೀರುಪಾಲಾಗಿದ್ದು, 3 ಮಂದಿ ಈಜಿ ದಡ ಸೇರಿರುವ ಘಟನೆ ಸೋಮವಾರ ಗದಗ್‌ನ ಗುಂಡರಗಿ ತಾಲೂಕಿನ ವಿಠಲಾಪುರದಲ್ಲಿ ನಡೆದಿದೆ.
ಎರಡು ತೆಪ್ಪದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೀಸಿದ ಗಾಳಿಯಿಂದ ಎರಡು ತೆಪ್ಪಗಳು ಮುಳುಗಿದ ಪರಿಣಾಮ 10ಮಂದಿ ಜಲಸಮಾಧಿಯಾಗಿರುವುದಾಗಿ ಶಂಕಿಸಲಾಗಿದ್ದು, ಮೂರು ಮಂದಿ ಈಜಿ ಪಾರಾಗಿದ್ದಾರೆ. ಇಬ್ಬರ ಶವ ಪತ್ತೆಯಾಗಿದೆ. ಉಳಿದವರಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಕೂಡಲೇ ತೆರಳಿ ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ಕೊಪ್ಪಳದಲ್ಲಿ ಆರು ಮಂದಿ ನೀರುಪಾಲು: ಮತ್ತೊಂದೆಡೆ ಕೆಲಸಕ್ಕಾಗಿ ತೆಪ್ಪದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ತುಂಗಭದ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿದ ಪರಿಣಾಮ ಆರು ಮಂದಿ ಸಾವನ್ನಪ್ಪಿರುವ ಘಟನೆ ಕೊಪ್ಪಳದ ಹ್ಯಾಟಿಮುಂಡರಗಿ ಗ್ರಾಮದಲ್ಲಿ ನಡೆದಿದೆ.
ತೆಪ್ಪದಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದು, 12ರ ಹರೆಯದ ಫಕೀರವ್ವ ಎಂಬಾಕೆಯೊಬ್ಬಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾಳೆ. ಹುಲಿಗೆವ್ವ, ಯಮುನವ್ವ, ಲಕ್ಷ್ಮಮ್ಮವ್ವ, ವಿಜಯವ್ವ, ಪಂಪಾವತಿ, 2ವರ್ಷದ ಪವಿತ್ರ ನೀರುಪಾಲಾಗಿದ್ದಾರೆ. ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಗಳ ರೋದನ ಮುಗಿಲು ಮುಟ್ಟಿದೆ. ಶವಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ತಿಳಿಸಿದ್ದಾರೆ. |