ಪಕ್ಷದೊಳಗಿನ ಭಿನ್ನಮತದಿಂದಾಗಿ ಹೈರಾಣಾಗಿ ಹೋಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರದಂದು ಮಳೆಗಾಗಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ತಮಿಳುನಾಡಿನ ದೇವಾಲಯವೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನೆ ಎದುರಿಸಿದ ಘಟನೆ ನಡೆದಿದೆ.ರಾಜ್ಯದಲ್ಲಿ ಮಳೆಯಾಗಲಿ ಎಂಬ ನೆಲೆಯಲ್ಲಿ ಇಂದು ಮುಖ್ಯಮಂತ್ರಿಗಳು ಕುಟುಂಬ ಸಮೇತರಾಗಿ ತಮಿಳುನಾಡಿನ ಚಿದಂಬರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ದೇವಾಲಯ ಭೇಟಿ ಸಮಯದಲ್ಲಿ ಕಾವೇರಿ ಮುಖಜ ಭೂಮಿ ಪ್ರದೇಶದ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿದರು.ನಮಗೆ ಕಾವೇರಿ ನೀರು ಕೊಡಿ, ಕುಡಿಯಲು, ಬೆಳೆ ಬೆಳೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ರೈತರು ಏರು ಧ್ವನಿಯಲ್ಲಿ ಕೂಗಿದರು. ಅಷ್ಟರಲ್ಲಿ ಪೊಲೀಸರು ಮಧ್ಯಪ್ರವೇಶಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟಾರೆ ಪಕ್ಷದಲ್ಲಿ ಆಂತರಿಕ ಭಿನ್ನಮತದಿಂದ ಸುಸ್ತಾಗಿದ್ದ ಮುಖ್ಯಮಂತ್ರಿಗಳು ದೇವಾಲಯಕ್ಕೆ ಆಗಮಿಸಿದರು ಕೂಡ ಇಲ್ಲಿಯೂ ಕಾವೇರಿ ಜಲವಿವಾದದ ಬಿಸಿ ತಟ್ಟಿ ರೈತರಿಂದ ಕಪ್ಪು ಬಾವುಟ ಪ್ರದರ್ಶನ ಮಾಡಿಸಿಕೊಂಡು ಇರಿಸುಮುರಿಸಿಗೊಳಗಾದರು. |