ಬಂದೂಕು ತೊರೆದು ಮುಖ್ಯವಾಹಿನಿಯಲ್ಲಿ ಬದುಕ ಬಯಸುವ ನಕ್ಸಲರಿಗಾಗಿ ರಾಜ್ಯ ಸರ್ಕಾರ ಇನ್ನೊಂದು ತಿಂಗಳಲ್ಲಿ ವಿಶೇಷ ಪರಿಹಾರ ಯೋಜನೆ ಪ್ರಕಟಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ವಿ.ಎಸ್. ಆಚಾರ್ಯ, ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಕ್ಸಲರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಪ್ಯಾಕೆಜ್ ರೂಪಿಸಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ದಿ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ನಕ್ಸಲರ ಮನವೊಲಿಸಿ ಅವರು ಮುಖ್ಯ ವಾಹಿನಿಗೆ ಬರುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಹಿಂಸೆ ಬಿಟ್ಟು ಸಾಮಾನ್ಯ ಮನುಷ್ಯರಂತೆ ಬದುಕಲು ಇಚ್ಛಿಸುವ ನಕ್ಸಲರಿಗೆ ಅವಕಾಶ ಮಾಡಿಕೊಡಲಾಗುವುದು. ಈಗಾಗಲೇ ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಇನ್ನು ಒಂದು ತಿಂಗಳಲ್ಲಿ ಇದನ್ನು ಪ್ರಕಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದಕ್ಕಾಗಿ ಈಗಾಗಲೇ ಪಶ್ಚಿಮಘಟ್ಟದ ನಕ್ಸಲರ ಮನವೊಲಿಕೆ ಕಾರ್ಯ ನಡೆಸಲಾಗಿದ್ದು, ಕಳೆದ 3 ತಿಂಗಳಲ್ಲಿ ನಕ್ಸಲರ ಚಟುವಟಿಕೆ ಗಣನೀಯವಾಗಿ ತಗ್ಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. |