ಉದ್ಯಾನನಗರಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಓಡಾಡುವ ಸಾರ್ವಜನಿಕರಿಗಾಗಿ ಸಾರಿಗೆ ಇಲಾಖೆ ಇದೀಗ ಮರ್ಸಿಡಿಸ್ ಬೆಂಜ್ ಬಸ್ ಸೇವೆ ಕಲ್ಪಿಸಿದೆ. ಈ ಮೂಲಕ ಬೆಂಜ್ ಬಸ್ ಸೇವೆ ದೇಶದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ರಾಜ್ಯ ರಸ್ತೆ ಸಾರಿಗೆ ಪಾತ್ರವಾಗಿದೆ.
ಬೆಂಗಳೂರಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ಆರ್. ಅಶೋಕ್ ಈ ಬೆಂಜ್ ಬಸ್ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಗುಣಮಟ್ಟದ ಹವಾನಿಯಂತ್ರಿತ ಬಸ್ ಸೇವೆ ವೋಲ್ವೋ ಬಸ್ಗಿಂತಲೂ ಉತ್ತಮ. ಪ್ರಾಯೋಗಿಕವಾಗಿ ಇದನ್ನು ಬೆಂಗಳೂರು ಮೈಸೂರು ಮಾರ್ಗವಾಗಿ ಆರಂಭಿಸಲಾಗಿದೆ. ಯಶಸ್ವಿಯಾದರೆ ರಾಜ್ಯಾದ್ಯಂತ ಇದನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ, ಪ್ರಸ್ತುತ ಸೇವೆಯಲ್ಲಿರುವ ವೋಲ್ವೋಗಿಂತ ಮಿತವ್ಯಯಕಾರಿಯಾದ ಈ ಬಸ್ಸಲ್ಲಿ ಎರಡು ಎಲ್ಸಿಡಿ ಟಿವಿ, ಹೆಚ್ಚು ಸರಕು ಸಾಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಸಾರಿಗೆ ಮೂಲ ಸೌಕರ್ಯ ಉನ್ನತೀಕರಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ 161 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸಾರಿಗೆ ಸೌಲಭ್ಯಗಳನ್ನು ಬಲಪಡಿಸಲಾಗುವುದು ಎಂದು ಅವರು ತಿಳಿಸಿದರು.
ಬಿಬಿಎಂಪಿ ಚುನಾವಣೆ ಮುಂದೂಡಿಕೆ ಇಲ್ಲ ಇದೇ ವೇಳೆ ಬಿಬಿಎಂಪಿ ಚುನಾವಣೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಬಿಎಂಪಿ ಚುನಾವಣೆಗೆ ಸರ್ಕಾರದ ಕಡೆಯಿಂದ ಆಗಬೇಕಾದ ಪೂರಕ ಪ್ರಕ್ರಿಯೆಗಳು ಅಂತಿಮ ಹಂತ ತಲುಪಿದ್ದು, ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. |