ಆಡಳಿತಾರೂಢ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿ ಒಂದು ವರ್ಷ ಕಳೆದಿದೆ. ಇದರ ಹಿನ್ನೆಲೆಯಲ್ಲಿ ಸಚಿವರು ಏನು ಕೆಲಸ ಮಾಡಿದ್ದೀರಿ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಎಲ್ಲಾ ಸಚಿವರಿಗೆ ಪತ್ರ ರವಾನಿಸಿದ್ದಾರೆ.ಸಚಿವರ ಕಾರ್ಯ ವೈಖರಿ ಬಗ್ಗೆ ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಎಲ್ಲಾ 34 ಸಚಿವರಿಗೆ ಪತ್ರವನ್ನು ರವಾನಿಸಲಾಗಿದೆ ಎಂದು ಹೇಳಿದರು. ಒಂದು ವರ್ಷದ ಅವಧಿಯಲ್ಲಿ ಏನು ಕೆಲಸ ಮಾಡಿದ್ದೀರಿ? ಸಂಘಟನಾತ್ಮಕವಾಗಿ ನಿಮ್ಮ ಸಾಧನೆ? ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಸಚಿವರಿಗೆ ಪತ್ರ ರವಾನಿಸಲಾಗಿದ್ದು, ಹತ್ತು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಈ ವರದಿಯನ್ನು ನಂತರ ಕೇಂದ್ರ ವರಿಷ್ಠರ ಮಂಡಳಿಗೆ ಕಳುಹಿಸಿ ಸಚಿವರ ಸಾಧನೆಯ ಮೌಲ್ಯಮಾಪನ ಮಾಡಲಾಗುವುದು ಎಂದು ಸದಾನಂದ ಗೌಡರು ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.ಪಕ್ಷದೊಳಗೆ ಅಸಮಾಧಾನದ ಕಿಚ್ಚು ಬೂದಿಮುಚ್ಚಿದ ಕೆಂಡದಂತಿದ್ದು, ಇದೀಗ ರಾಜ್ಯಾಧ್ಯಕ್ಷರು ಸಚಿವರ ಮೌಲ್ಯಮಾಪನ ಕುರಿತಂತೆ ವರದಿ ನೀಡುವಂತೆ ಪತ್ರ ರವಾನಿಸಿದ್ದಾರೆ. ಇದರೊಂದಿಗೆ 'ದಂಡಪಿಂಡ ಸಚಿವರಿಗೆ ಗೇಟ್‌ಪಾಸ್' ನೀಡಲಾಗುವುದು ಎಂಬ ಗೌಡರ ಮುನ್ನೆಚ್ಚರಿಕೆ ವೇದಿಕೆ ಸಿದ್ದವಾದಂತಾಗಿದೆ. |