ರಾಜ್ಯದಲ್ಲಿ ಈಗಾಗಲೇ ಪಡಿತರ ಚೀಟಿ ಗೊಂದಲ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಬಹುದೊಡ್ಡ ವಿಪರ್ಯಾಸ ಎಂಬಂತೆ ಕರ್ನಾಟಕದಲ್ಲಿ ಬಡತನ ರೇಖೆಗಳಿಗಿಂತ ಕೆಳಗಿರುವ ಕುಟುಂಬಗಳಿಕ್ಕಿಂತ ಪಡಿತರ ಚೀಟಿಯ ಸಂಖ್ಯೆಯೇ ಅಧಿಕವಾಗಿರುವ ಅಂಶ ಬೆಳಕಿಗೆ ಬಂದಿದೆ.
ಪ್ರಸಕ್ತ ಸಾಲಿನ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಸ್ವಯಂಘೋಷಿತ ಅಫಿಡವಿತ್‌ನಂತೆ 25ಲಕ್ಷ ಕುಟುಂಬಗಳಿಗೆ ತಾತ್ಕಾಲಿಕ ಪಡಿತರ ಚೀಟಿಯನ್ನು ವಿತರಿಸಲಾಗಿತ್ತು. ಆದರೆ ಇದು ಬಡತನ ರೇಖೆಗಳಿಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆಗೂ ಪಡಿತರ ಚೀಟಿಗೂ ತಾಳೆಯಾಗುತ್ತಿಲ್ಲ, ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿತ್ತು.
ತಾತ್ಕಾಲಿಕ ಪಡಿತರ ಚೀಟಿಯನ್ನು ಮುಖ್ಯವಾಗಿ ರಾಜ್ಯದ ಶಿವಮೊಗ್ಗ, ದಾವಣಗೆರೆ, ಕೋಲಾರ, ಬಳ್ಳಾರಿ, ಉಡುಪಿ, ತುಮಕೂರು ಮತ್ತು ಗುಲ್ಬರ್ಗಗಳಲ್ಲಿ ವಿತರಿಸಲಾಗಿತ್ತು. 2002ರವರೆಗೆ 36 ಲಕ್ಷ ಕುಟುಂಬಗಳು ಖಾಯಂ ಪಡಿತರ ಚೀಟಿಯನ್ನು ಹೊಂದಿದ್ದವು.
ಅಣಕವೆಂದರೆ ಪಡಿತರ ಚೀಟಿಗಿಂತ ಬಿಪಿಎಲ್ ಕುಟುಂಬಗಳ ಸಂಖ್ಯೆಯೇ ಅಧಿಕವಾಗಿತ್ತು. ಆ ನಿಟ್ಟಿನಲ್ಲಿ ಬಿಪಿಎಲ್‌ಗೆ ಸಂಬಂಧಪಟ್ಟಂತೆ ಪುನರ್ ಸಮೀಕ್ಷೆ ನಡೆಸಿ ಖಾಯಂ ಪಡಿತರ ಚೀಟಿಯನ್ನು ವಾಪಸು ಪಡೆಯಲಾಗಿತ್ತು. ಇದರ ಆಧಾರದ ಮೇಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಖಾಯಂ ಪಡಿತರ ಚೀಟಿಯನ್ನು ವಿತರಿಸಿಲ್ಲ ಎಂದು ಕರ್ನಾಟಕದ ಕ್ಯಾಂಪೇನ್ ಕೋ ಆರ್ಡಿನೇಟರ್ ಸಿ.ವಿ.ನಾಗರಾಜ್ ವಿವರಿಸಿದ್ದಾರೆ.
ನ್ಯಾಷನಲ್ ಸ್ಯಾಂಪಲ್ ಸರ್ವೇ ಮಂಡಳಿ ಅಂಕಿ-ಅಂಶದ ಪ್ರಕಾರ, ರಾಜ್ಯದಲ್ಲಿ ಬಿಪಿಎಲ್ ಮತ್ತು ಎಎವೈ(ಅಂತ್ಯೋದಯ ಅನ್ನ ಯೋಜನೆ) ಸೇರಿದಂತೆ ಒಟ್ಟ 31.6ಲಕ್ಷ ಕುಟುಂಬಗಳಿವೆ. ಅದರ ಪ್ರಕಾರ ಕೇಂದ್ರ 31.6ಲಕ್ಷ ಕುಟುಂಬಗಳಿಗೆ ಮಾತ್ರ ಪಡಿತರವನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಹೆಚ್ಚಿನವರು ತುಂಬಾ ಬಡವರಾಗಿದ್ದಾರೆ. 25 ಲಕ್ಷ ತಾತ್ಕಾಲಿಕ ಪಡಿತರ ಚೀಟಿಯನ್ನು ರಾಜ್ಯದಲ್ಲಿ ಈಗಾಗಲೇ ವಿತರಿಸಲಾಗಿದೆ. ಅಲ್ಲದೇ ರಾಜ್ಯದಲ್ಲಿ 96ಲಕ್ಷ ಬಿಪಿಎಲ್ ಕುಟುಂಬಗಳಿದ್ದು, ಕೇಂದ್ರ ಸರ್ಕಾರ ಕೇವಲ 31.6ಲಕ್ಷ ಕುಟುಂಬಗಳಿಗೆ ಮಾತ್ರ ಪಡಿತರ ನೀಡುತ್ತಿದೆ ಎಂದು ಕೋಮಾಟ್ ಟೆಕ್ನಾಲಜೀಸ್ ಸಿಇಓ ಶ್ರೀರಾಮ್ ರಾಘವನ್ ತಿಳಿಸಿದ್ದಾರೆ. |