ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಮತದಾರರನ್ನು ಒಲೈಸುವಲ್ಲಿ ವಿಫಲವಾಗಿರುವುದೇ ಉಪಚುನಾವಣೆಯ ಸೋಲು ಹಾಗೂ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಕಡಿಮೆ ಸ್ಥಾನ ಪಡೆಯುವುದಕ್ಕೆ ಕಾರಣವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷದ ಹಿನ್ನೆಡೆಗೆ ಕಾರ್ಯಕರ್ತರಾಗಲಿ, ಮತದಾರರಾಗಲಿ ಕಾರಣರಲ್ಲ. ಬದಲಾಗಿ ಪಕ್ಷದ ನಾಯಕರಲ್ಲಿದ್ದ ಒಗ್ಗಟ್ಟಿನ ಕೊರತೆಯೇ ಪ್ರಮುಖ ಕಾರಣ. ಈ ಬಗ್ಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಲವು ಬಾರಿ ಹೇಳಿಕೊಂಡು ಬಂದಿದ್ದರು ಎಂದು ತಿಳಿಸಿದರು.
ಇನ್ನು ಮುಂದೆ ಹಾಗಾಗಬಾರದು. ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಲಾಗುವುದು. ಇದಕ್ಕೆ ಮಾಧ್ಯಮದವರ ಸಹಕಾರವೂ ಬೇಕು. ಮಾಧ್ಯಮಗಳ ಮೂಲಕ ನಡೆಯುವ ಸಂಘರ್ಷವೇ ಪಕ್ಷದಲ್ಲಿರುವ ಲೋಪ ಸರಿಮಾಡಲು ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಲ್ಲದೆ, ಪಕ್ಷದ ಹಿರಿಯ ನಾಯಕರು ಜೊತೆಗೂಡಿ ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷ ಬಲವರ್ಧನೆಗೆ ಶ್ರಮಿಸಲಿದ್ದಾರೆ ಎಂದು ಅವರು ನುಡಿದರು.
|