ದೇಶ ಹಾಗೂ ವಿದೇಶಗಳಲ್ಲಿರುವ ಭಾರತೀಯರಿಗೆ ಉದ್ಯಾನನಗರಿಯಲ್ಲಿ ನಿವೇಶನ ನೀಡುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿರುವ ಜೋಸೆಫ್ ಚಾಕೋವಿನಿಂದ ವಂಚನೆಗೊಳಗಾಗಿದ್ದ ಅನಿವಾಸಿ ಭಾರತೀಯರಿಗೆ ನ್ಯಾಯ ಒದಗಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅನಿವಾಸಿ ಭಾರತೀಯ ಸಮಿತಿಯ ಕರ್ನಾಟಕದ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಈ ಸಮಿತಿ ವಂಚನೆಗೊಳಗಾಗಿರುವ ಅನಿವಾಸಿ ಭಾರತೀಯರಿಗೆ ನಿವೇಶನಗಳನ್ನು ನೀಡಿ ಸಮಸ್ಯೆಗೆ ಪರಿಹಾರ ನೀಡಲಿದೆ ಎಂದರು.
ಈ ಸಮಿತಿ ಅರ್ಹ ನಿವೇಶನದಾರರಿಗೆ ನಿವೇಶನಗಳನ್ನು ನೀಡಿ ಅನಿವಾಸಿ ಭಾರತೀಯರ ವಿಶ್ವಾಸ ಗಳಿಸುವ ಕೆಲಸ ಮಾಡಲಿದೆ ಎಂದರು.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಅನಿವಾಸಿ ಭಾರತೀಯರ ದ್ವಿತೀಯ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೊಲ್ಲಿ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ಅನಿವಾಸಿ ಭಾರತೀಯರು ಜೋಸೆಫ್ ಚಾಕೋ ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರಿಗೆ ನಿವೇಶನ ಹಂಚಿಕೆ ವಿಷಯದಲ್ಲಿ ವಂಚನೆ ಮಾಡಿರುವ ಬಗ್ಗೆ ಪ್ರಸ್ತಾಪಿಸಿ ಶೀಘ್ರ ಕ್ರಮಕ್ಕೆ ಮನವಿ ಮಾಡಿದ್ದರು. ಅದರಂತೆ ಜೋಸೆಫ್‌ನನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು. |