"ರಾಜ್ಯದಲ್ಲಿ ಬೇಕೆಂದರೂ ಇನ್ನೊಬ್ಬ ಯಡಿಯೂರಪ್ಪ ನಮಗೆ ಸಿಗಲ್ಲ. ಅವರ ನಾಯಕತ್ವದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಬೇಕಿದೆ. ತಾವು ಎತ್ತಿದ ಎಲ್ಲಾ ಸವಾಲುಗಳು, ಸಮಸ್ಯೆಗಳಿಗೆ ಪರಿಹಾರ ದೊರೆತಿದ್ದು, ಸುಸೂತ್ರ ಆಗಿದೆ"!
ಹೀಗೆಂದವರು ಮತ್ಯಾರೂ ಅಲ್ಲ, ರಾಜ್ಯ ಬಿಜೆಪಿಯಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿ, ಶಿಸ್ತಿನ ಪಕ್ಷದೊಳಗೆ ಭಿನ್ನಮತದ ಕೋಲಾಹಲಕ್ಕೆ ಇತ್ತೀಚೆಗೆ ಚಾಲನೆ ನೀಡಿದ್ದ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ!
ಇದುವರೆಗೆ ತಾವು ಎತ್ತಿರುವ ಸವಾಲುಗಳು, ಸಮಸ್ಯೆಗಳಿಗೆ ಪರಿಹಾರ ದೊರೆತಿರುವ ಪ್ರತ್ಯಕ್ಷ ಸೂಚನೆಗಳು ಮುಂಬರುವ ದಿನಗಳಲ್ಲಿ ಪ್ರಕಟವಾಗಲಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಮುಂದಿನ ನಾಲ್ಕು ವರ್ಷಗಳ ಕಾಲ ಯಡಿಯೂರಪ್ಪನವರೇ ನಮ್ಮ ನಾಯಕರು. ಎಲ್ಲಾ ಕುಟುಂಬಗಳಲ್ಲಿರುವಂತೆ ಇಲ್ಲಿಯೂ ಇರುವ ಭಿನ್ನಭಿಪ್ರಾಯಗಳನ್ನು ಮುಖಂಡರು ಸೇರಿಕೊಂಡು ಸರಿಪಡಿಸಿಕೊಂಡಿದ್ದೇವೆ. ಒಗ್ಗಟ್ಟಿನಿಂದ ಮುಂದೆ ಸಾಗುತ್ತೇವೆ ಎನ್ನುವ ವಿಶ್ವಾಸ ತಮಗಿದೆ ಎಂದರು.
ಇದೇ ವೇಳೆ ರೆಡ್ಡಿ ಸಹೋದರರ ಕುರಿತು ಪ್ರತಿಕ್ರಿಯಿಸಿದ ಸಚಿವರು, ರೆಡ್ಡಿ ಸಹೋದರರು ಯಡಿಯೂರಪ್ಪ ನಾಯಕತ್ವದ ಮೇಲೆ ಸಂಪೂರ್ಣ ಭರವಸೆ ಇಟ್ಟಿರುವ ಹೇಳಿಕೆಗಳನ್ನು ಹಲವು ಬಾರಿ ಹೇಳಿಕೊಂಡು ಬಂದಿದ್ದಾರೆ. ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪನವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. |