ಪಕ್ಷದಲ್ಲಿ ಸಾಕಷ್ಟು ಹೊಸ ನಾಯಕರು ಇದ್ದಾರೆ. ಹೀಗಾಗಿ ಪಕ್ಷದ ಅಧ್ಯಕ್ಷ ಪದವಿ ಇನ್ನು ತನಗೆ ಬೇಡ ಎಂದು ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿ ಹೇಳಿದ್ದಾರೆ.
ಕಾಫಿ ನಾಡಿನಲ್ಲಿ ವಿಶ್ರಾಂತಿಗಾಗಿ ಆಗಮಿಸಿದ ಆಡ್ವಾಣಿ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿಜಯದ ಕುರಿತು ಪ್ರತಿಕ್ರಿಯಿಸುತ್ತಾ, ಜನಾದೇಶಕ್ಕೆ ತಲೆಬಾಗುವುದಾಗಿ ಹೇಳಿದರಲ್ಲದೆ, ಬಿಜೆಪಿಯು ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ವಿಶ್ರಾಂತಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟ ನೇತೃತ್ವ ವಹಿಸಿ ದೇಶವ್ಯಾಪಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು, ಅವಿರತ ಸಂಚಾರದಿಂದ ದಣಿದಿರುವ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಕುಟುಂಬ ಸಮೇತರಾಗಿ ಪ್ರಕೃತಿ ಸೌಂದರ್ಯದ ತಾಣವಾಗಿರುವ ಕೊಡಗಿನಲ್ಲಿ ವಿಶ್ರಾಂತಿಗಾಗಿ ಠಿಕಾಣಿ ಹೂಡಿದ್ದಾರೆ.
ಮಡಿಕೇರಿಗೆ ತೆರಳಲು ಮಂಗಳವಾರ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ಆಡ್ವಾಣಿ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರಮಾಡಿಕೊಂಡಿದ್ದರು.
ಮಡಿಕೇರಿಯಿಂದ 30ಕಿ.ಮೀ. ದೂರದಲ್ಲಿರುವ ವಿರಾಜಪೇಟೆ ಸಮೀಪದ ವಿಹಾರಧಾಮವೊಂದರಲ್ಲಿ ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಆಡ್ವಾಣಿ ಕುಟುಂಬ ಸಮೇತರಾಗಿ ಮಡಿಕೇರಿಗೆ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ವಿಶ್ರಾಂತಿಗಾಗಿ ಆಡ್ವಾಣಿಜೀ ಮಡಿಕೇರಿಗೆ ಆಗಮಿಸಿದ್ದಾರೆ. ಅವರ ಭೇಟಿಯ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಲ್ಲ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಾನು ಮತ್ತೆ ಆಕಾಂಕ್ಷಿಯಲ್ಲ. ಈ ಸ್ಥಾನ ತುಂಬಲು ಪಕ್ಷದಲ್ಲಿ ಸಾಕಷ್ಟು ಅರ್ಹ ಅಭ್ಯರ್ಥಿಗಳಿದ್ದಾರೆ ಎಂದು ಎಲ್.ಕೆ. ಅಡ್ವಾಣಿ ತಿಳಿಸಿದ್ದಾರೆ.
ಐದು ದಿನಗಳ ಕಾಲ ವಿಶ್ರಾಂತಿಗಾಗಿ ಕೊಡಗು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಕೆಲವು ಮಾಧ್ಯಮಗಳಲ್ಲಿ ತಾನು ಮತ್ತೆ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬ ವರದಿಗಳು ಬರುತ್ತಿದೆ. ಆದರೆ, ತಾನು ಆ ಸ್ಥಾನಕ್ಕೆ ಖಂಡಿತ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ಬಿಜೆಪಿ ವಿನಮ್ರವಾಗಿ ಸ್ವೀಕರಿಸಿದ್ದೇವೆ. ಆದರೆ ಬಿಜೆಪಿ ಕಾಂಗ್ರೆಸ್ ಹೊರತುಪಡಿಸಿದರೆ ಮೂರನೇ ಪಕ್ಷಕ್ಕೆ ಮೂರಂಕಿಯ ಸ್ಥಾನ ಲಭಿಸದಿರುವ ಗಮನಾರ್ಹ ಎಂದು ಅವರು ಹೇಳಿದರು. |