ತುಂಗಭದ್ರೆಯಲ್ಲಿ ಸೋಮವಾರ ಸಂಭವಿಸಿದ ಎರಡು ಪ್ರತ್ಯೇಕ ತೆಪ್ಪ ದುರಂತಕ್ಕೆ ಬಲಿಯಾದವರ ಪೈಕಿ ಮಂಗಳವಾರ ಎಂಟು ಶವಗಳು ಪತ್ತೆಯಾಗಿವೆ. ಮೀನುಗಾರರ ತೆಪ್ಪಗಳೆರಡು ಗಾಳಿಗೆ ಬುಡಮೇಲಾದ ಪರಿಣಾಮ ತುಂಗಭದ್ರ ನದಿಯಲ್ಲಿ ಮುಳುಗಿದ್ದವರ ಪೈಕಿ ಎಂಟು ಜನರ ಶವ ಮಂಗಳವಾರ ಪತ್ತೆಯಾದಂತಾಗಿದೆ.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಾಗಳ ಗ್ರಾಮದಿಂದ ಜಿಲ್ಲೆಯ ವಿಠಲಾಪುರದತ್ತ ಆಗಮಿಸುತ್ತಿದ್ದ ಮೀನುಗಾರರ ತೆಪ್ಪಗಳು ಸೋಮವಾರ ಸಂಜೆ ವೇಳೆಗೆ ನದಿಯ ಮಧ್ಯಭಾಗದಲ್ಲಿದ್ದಾಗ ಭಾರೀ ಗಾಳಿ ಬೀಸಿದ ಪರಿಣಾಮ ಮುಳುಗಿತ್ತು. ಒಟ್ಟು 12ಮಂದಿ ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸೋಮವಾರ ಶಂಕಿಸಿದ್ದರು.
ಅದೇ ರೀತಿ ಕೊಪ್ಪಳ ತಾಲೂಕಿನ ಹ್ಯಾಟಿ ಮುಂಡರಗಿ ಬಳಿ ತುಂಗಭದ್ರಾ ಹಿನ್ನೀರಿನಲ್ಲಿ ಸೋಮವಾರ ಸಂಭವಿಸಿದ ತೆಪ್ಪ ದುರಂತಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಶೋಧ ಕಾರ್ಯದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ವಿಜಯಲಕ್ಷ್ಮಿ ವಾಸಪ್ಪ ಪೂಜಾರ(17) ಹಾಗೂ ಪಂಪಾವತಿ(40) ಎಂದು ಗುರುತಿಸಲಾಗಿದೆ. ಇನ್ನೂ ಒಬ್ಬರು ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. |