ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗೆ ಸೇರಿ ಖಾಸಗಿ ಪ್ರಾಕ್ಟೀಸ್ ಮಾಡುವ ವೈದ್ಯರ ವಿರುದ್ಧ ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೇ ಇಂತಹವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ಎಷ್ಟು ಮಂದಿ ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿಲ್ಲ? ಇಂತಹವರಿಗೆ ಸರ್ಕಾರಿ ಕೆಲಸ ಏಕೆ ಬೇಕು?ಜನರ ಸೇವೆ ಮಾಡುವ ವೈದ್ಯರೇ ಹೀಗೆ ಮಾಡಿದರೆ ಇನ್ನು ರೋಗಿಗಳನ್ನು ಕಾಪಾಡುವವರು ಯಾರು ಎಂದು ಖಾರವಾಗಿ ಕೋರ್ಟ್ ಪ್ರಶ್ನಿಸಿದೆ.
ವೈದ್ಯರ ಮುಷ್ಕರ ಕುರಿತಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಂದುವರಿಸಿದ ಮುಖ್ಯ ನ್ಯಾ.ಪಿ.ಡಿ.ದಿನಕರನ್ ಮತ್ತು ನ್ಯಾ.ವಿ.ಜಿ.ಸಭಾಹಿತ್ ಅವರಿದ್ದ ವಿಭಾಗೀಯ ಪೀಠ, ಇಂತಹ ವೈದ್ಯರ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿರುವ ಸರ್ಕಾರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿತು.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವೈದ್ಯಾಧಿಕಾರಿಗಳ ಸಂಘದ ಪರ ವಕೀಲರು ವೇತನ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿದರು. ಈ ತಾರತಮ್ಯ ಸರಿಪಡಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಹೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಈ ವಾದ ನ್ಯಾಯಮೂರ್ತಿಗಳ ಆಕ್ರೋಶಕ್ಕೆ ಮೂಲವಾಯಿತು. |