ಕೃಷ್ಣಯ್ಯ ಶೆಟ್ಟಿಯವರು ಸಚಿವರಾಗಿದ್ದ ಸಂದರ್ಭದಲ್ಲಿ ಸ್ವಾಮಿನಿಷ್ಠೆ ಪ್ರದರ್ಶಿಸುವ ಸಲುವಾಗಿ ಮುಖ್ಯಮಂತ್ರಿಗಳ ಹೆಸರಲ್ಲಿ ಮುಜರಾಯಿ ಇಲಾಖೆಯಡಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಪ್ರತಿದಿನ ಪೂಜೆ ನಡೆಸಬೇಕೆಂಬ ಫರ್ಮಾನು ಹೊರಡಿಸಿ ವಿವಾದ ಹುಟ್ಟುಹಾಕಿದ್ದು ಹಳೆಕಥೆ. ಇದೀಗ ಎರಡನೇ ಸರದಿ ನೂತನವಾಗಿ ಸಚಿವರಾಗಿರುವ ವಿ.ಸೋಮಣ್ಣ ಅವರದ್ದು.
ಇನ್ನು ಮುಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ಅಧಿಕೃತವಾಗಿ ಬಡಾವಣೆಗಳು ತಲೆಎತ್ತಲಿವೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ತಮಗೆ ಮಂತ್ರಿಸ್ಥಾನ ಕರುಣಿಸಿರುವ ಕಾರಣ ವಸತಿ ಖಾತೆಯ ಜವಾಬ್ದಾರಿ ಹೊತ್ತಿರುವ ಸೋಮಣ್ಣ ಈ ನಿರ್ಧಾರಕ್ಕೆ ಬಂದಿದ್ದಾರೆ.
ಮೊದಲಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಗೃಹ ನಿರ್ಮಾಣ ಮಂಡಳಿಯ ಬಡಾವಣೆಗೆ ಯಡಿಯೂರಪ್ಪ ಅವರ ಹೆಸರನ್ನಿಡುವ ತೀರ್ಮಾನ ಪ್ರಕಟಿಸಿದ್ದು, ಈ ಕಾಮಗಾರಿಯನ್ನು ಬರುವ ಒಂಬತ್ತು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೋಮಣ್ಣ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಕಟ್ಟಾಜ್ಞೆ ನೀಡಿದ್ದಾರೆ.
ಮಂಗಳವಾರ ರಾತ್ರಿ ಗೃಹ ನಿರ್ಮಾಣ ಮಂಡಳಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸೋಮಣ್ಣ, ನಂತರ ತರಾತುರಿಯಲ್ಲಿ ಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡ ಅವರೊಂದಿಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. |