ತಮ್ಮದು ಕೊಲೆಗಡುಕ ಕುಟುಂಬ ಎಂದು ಗಂಭೀರವಾಗಿ ಆರೋಪಿಸಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಾಜಿ ಸಚಿವ ದಿವಾಕರ ಬಾಬು ತಿಳಿಸಿದ್ದಾರೆ.
ಕುಟುಂಬದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ ಅವರು, ಬಾಯಿಗೆ ಬಂದಂತೆ ಮಾತನಾಡುತ್ತಿರುವ ರೆಡ್ಡಿ ವಿರುದ್ಧ ದೂರು ದಾಖಲಿಸುವುದಾಗಿ ಗುರುವಾರ ವಿಧಾನಸೌಧದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಮಾಜಿ ಸಚಿವ ದಿವಾಕರ ಬಾಬು ಅವರು ತಮ್ಮ ವಿರುದ್ಧ ಬುಧವಾರ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, 'ಬಾಬು ಅವರದ್ದು ಕೊಲೆಗಡುಕ ಕುಟುಂಬ' ಎಂದು ಗಂಭೀರವಾಗಿ ಆರೋಪಿಸಿದ್ದರು.
ಅಲ್ಲದೇ ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿರುವ ಬಾಬು ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ರಾಜಕೀಯ ಲಾಭ ಪಡೆಯುವ ಹುನ್ನಾರ ಎಂದು ಲೇವಡಿ ಮಾಡಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೆದಿರುವ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಅಕ್ರಮ ಗಣಿಗಾರಿಕೆಯಲ್ಲಿ ತಾವು ಭಾಗಿಯಾಗಿಲ್ಲ. ಅಲ್ಲದೇ ದಿವಾಕರ ಬಾಬು ಅವರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು. ಇದಕ್ಕಾಗಿ ಕೇಂದ್ರ ಸರ್ಕಾರ ಮಾಡುವ ಜಂಟಿ ಸಮೀಕ್ಷೆ ತಾವು ಬದ್ಧ ಎಂದು ಸವಾಲು ಹಾಕಿದ್ದರು. |