ಗಣಿಧಣಿಗಳ ವಿರುದ್ಧ ದಾಖಲಾದ 17 ಕ್ರಿಮಿನಲ್ ಕೇಸ್‌ಗಳನ್ನು ವಾಪಸು ತೆಗೆದುಕೊಂಡು ತೀವ್ರ ಟೀಕೆಗೆ ಒಳಗಾಗಿದ್ದ ರಾಜ್ಯ ಸರ್ಕಾರ ವಿರೋಧಪಕ್ಷಗಳ ಬಾಯಿಮುಚ್ಚಿಸುವ ತಂತ್ರ ಎಂಬಂತೆ ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ದಾಖಲಾಗಿದ್ದ 17 ಪ್ರಕರಣಗಳನ್ನು ವಾಪಸ್ಸು ಪಡೆದಿದೆ.ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿಯ ಐತಿಹಾಸಿಕ ಸುಗ್ಗಲಮ್ಮ ದೇವಾಲಯ ಧ್ವಂಸ, ಚುನಾವಣಾ ಅಕ್ರಮ ಸೇರಿದಂತೆ ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ ಗಣಿಧಣಿ ಮತ್ತು ಬೆಂಬಲಿಗರ ವಿರುದ್ಧ ದಾಖಲಾಗಿದ್ದ 16 ಕ್ರಿಮಿನಲ್ ಮೊಕದ್ದಮೆಯನ್ನು ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲಾಗಿತ್ತು. ಈ ನಿರ್ಧಾರವನ್ನು ವಿರೋಧಪಕ್ಷ ಕಟುವಾಗಿ ಟೀಕಿಸಿತ್ತು. ಅಲ್ಲದೇ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕೂಡ ಸರ್ಕಾರದ ನಿಲುವನ್ನು ಸದನದಲ್ಲಿ ಪ್ರಶ್ನಿಸುವುದಾಗಿ ಗುಡುಗಿದ್ದರು.ಇದೀಗ ಬಿಜೆಪಿ ಸರ್ಕಾರ ಬ್ಯಾಲೆನ್ಸಿಂಗ್ ತಂತ್ರ ಎಂಬಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿದ್ದು ಬೆಂಬಲಿಗರ ಮೇಲಿನ ದೂರನ್ನು ಹಿಂಪಡೆದಿದೆ ಎಂಬುದು ರಾಜಕೀಯ ಪಡಸಾಲೆಯಲ್ಲಿ ಊಹಾಪೋಹಗಳು ಹರಿದಾಡತೊಡಗಿವೆ.ಅಲ್ಲದೇ ಚಿಕ್ಕಬಳ್ಳಾಪುರದಲ್ಲಿ ಸುಮಾರು 20ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲಾ ಕಾಂಪ್ಲೆಕ್ಸ್ ನಿರ್ಮಾಣ, ದಾವಣಗೆರೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಸಚಿವ ಸಂಪುಟ ಸಭೆ ಮುಕ್ತಾಯಗೊಂಡ ನಂತರ ಗೃಹಸಚಿವ ವಿ.ಎಸ್.ಆಚಾರ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.ದಾವಣಗೆರೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲೇ ವಿವಿ ಅಸ್ತಿತ್ವಕ್ಕೆ ಬರಲಿದ್ದು, ವಿಶ್ವವಿದ್ಯಾಲಯ ವ್ಯಾಪ್ತಿಗೆ ಸುಮಾರು 20ಸಾವಿರ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳಲಿದ್ದಾರೆ. ಮಂಗಳೂರು ಬೆಂಗಳೂರು ನಡುವೆ ಸುಮಾರು 480ಕಿ.ಮೀ.ಉದ್ದದ ಅನಿಲ ಮಾರ್ಗವನ್ನು ನಿರ್ಮಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕೇಸ್ ವಾಪಸ್ಸಿನ ಹಿಂದೆ ರಾಜಕೀಯವಿಲ್ಲ: ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಶಿಷ್ಟಾಚಾರದಂತೆ ಸಿದ್ದರಾಮಯ್ಯನವರನ್ನು ಆಹ್ವಾನಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ 17ಪ್ರಕರಣ ದಾಖಲಾಗಿತ್ತು.ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಬೆಂಬಲಿಗರ ವಿರುದ್ಧ ದಾಖಲಾದ ಪ್ರಕರಣ ವಾಪಸಾತಿ ಕುರಿತಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೈಸೂರಿನಲ್ಲಿ ನಡೆದ ಪ್ರಕರಣದಲ್ಲಿ ಸುಳ್ಳು ಕೇಸ್ ದಾಖಲಿಸಲಾಗಿತ್ತು, ಆ ಕುರಿತು ಸಿಓಡಿ ತನಿಖೆಯೂ ನಡೆದಿತ್ತು. ಅದು ಸುಳ್ಳು ಪ್ರಕರಣ ಎಂದು ಸಿಓಡಿ ವರದಿ ನೀಡಿತ್ತು. ಆ ನಿಟ್ಟಿನಲ್ಲಿ ಕೇಸ್ ವಾಪಸ್ ಪಡೆಯುವಂತೆ 3ತಿಂಗಳ ಹಿಂದೆ ಸಿಎಂಗೆ ಪತ್ರ ಬರೆದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಆದರೆ ಬಳ್ಳಾರಿ ಗಣಿಧಣಿಗಳ ಕೇಸ್ ವಾಪಸಿಗೂ, ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದ ಅವರು, ರೆಡ್ಡಿ ಸಹೋದರರ ವಿರುದ್ಧ ದಾಖಲಾದ ಪ್ರಕರಣ ವಾಪಸ್ ತೆಗೆದುಕೊಳ್ಳಲು ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ನಮ್ಮ ಬೆಂಬಲಿಗರ ವಿರುದ್ಧ ದಾಖಲಾದ ದೂರು ಸುಳ್ಳು ಎಂಬುದಾಗಿ ಸಿಓಡಿ ವರದಿ ನೀಡಿತ್ತು. ಗಣಿಧಣಿಗಳ ವಿರುದ್ಧದ ಪ್ರಕರಣದಲ್ಲಿ ಯಾವ ತನಿಖೆ ನಡೆದಿದೆ, ಅದು ಸುಳ್ಳು ಅಂತ ವರದಿ ನೀಡಲಾಗಿತ್ತೇ?ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಅದು ರಾಜಕೀಯ ಹಿತಾಸಕ್ತಿಯಿಂದ ಕೈಗೊಂಡ ನಿರ್ಧಾರ ಎಂದು ತಿಳಿಸಿದ್ದಾರೆ. |