ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿರುವ ವರದಿಯ ಅನುಷ್ಠಾನದ ಬಗ್ಗೆ ಸರ್ಕಾರದ ನಿರಾಸಕ್ತಿಗೆ ಅತೃಪ್ತಿ ವ್ಯಕ್ತಪಡಿಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಈ ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ವರದಿಯನ್ನು ಸರ್ಕಾರಕ್ಕೆ ಕಳೆದ ಡಿಸೆಂಬರ್‌ನಲ್ಲಿ ನೀಡಲಾಗಿತ್ತು. ಇದರ ಬಗ್ಗೆ ಮೂರು ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಚ್ಚಿನ ಸಮಯ ಕೋರಿದ್ದರು. ಆದರೆ ಇದೀಗ ಚುನಾವಣೆ ಮುಗಿದು 2 ತಿಂಗಳು ಕಳೆದಿದೆ. ಸರ್ಕಾರ ವರದಿಯನ್ನು ತಕ್ಷಣದಲ್ಲಿ ಜಾರಿಗೆ ತರಲು ಬದ್ಧವಾಗಿದೆಯೋ ಎಂಬುದನ್ನು ಹೇಳಿ ಬಿಡಲಿ ಎಂಬ ಕಾರಣಕ್ಕೆ ಅಂತಿಮ ಪತ್ರ ಬರೆಯಲಾಗಿದೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮತ್ತೆ ಸರ್ಕಾರದ ಜೊತೆ ಸಂಪರ್ಕಿಸಲು ತಾವು ಇಚ್ಛಿಸುವುದಿಲ್ಲ. ಈ ವಿಚಾರದಲ್ಲಿ ರಾಜ್ಯಪಾಲರಿಗೆ ವರದಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇದಕ್ಕಾಗಿ ಸರ್ಕಾರ ಸಮಿತಿ ರಚನೆ ಮಾಡಿದ್ದಾಗಿ ಹೇಳಿತ್ತೇ ಹೊರತು ಸಮಿತಿ ಏನು ಮಾಡಿದೆ ಎಂಬ ಬಗ್ಗೆ ಮಾಹಿತಿಯನ್ನು ಇದುವರೆಗೂ ಲೋಕಾಯುಕ್ತರಿಗೆ ನೀಡಿಲ್ಲ ಎಂದು ಅವರು ದೂರಿದ್ದಾರೆ. |