ಜನಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ಮುಲಾಜಿಲ್ಲದೆ ವರ್ಗಾವಣೆ ಮಾಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಕಟ್ಟಪ್ಪಣೆ ಕೊಡಿಸಿದ್ದಾರೆ.
ಅಭಿವೃದ್ಧಿ ವೇಗಕ್ಕೆ ಹಿರಿಯ ಅಧಿಕಾರಿಗಳು ವಿಶೇಷವಾಗಿ ಕೆಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸ್ಪಂದಿಸುತ್ತಿಲ್ಲ. ಅವರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಬೇಕು ಎಂದು ಆದೇಶಿಸಿದರು.
ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಕುರಿತಂತೆ ಮೂರನೇ ದಿನವಾದ ಗುರುವಾರ ವಿವಿಧ ಇಲಾಖೆಗಳ ಸಚಿವರೊಂದಿಗೆ ಚಿಂತನ ಮಂಥನ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಕುರಿತು ತಾಕೀತು ಮಾಡಿದ್ದಾರೆ.
ರೈತರು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಕೆಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸಕ್ತಿ ವಹಿಸುತ್ತಿಲ್ಲ ಎಂದು ಕಿಡಿಕಾರಿದ ಯಡಿಯೂರಪ್ಪನವರು, ಯಾರು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲವೋ ಅಂತಹವರನ್ನು ಹಿಂದು ಮುಂದೆ ನೋಡದೆ ವರ್ಗಾವಣೆ ಮಾಡಿ, ದಕ್ಷ ಅಧಿಕಾರಿಗಳನ್ನು ಆ ಸ್ಥಾನಕ್ಕೆ ನೇಮಕ ಮಾಡಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ಅವರಿಗೆ ಸೂಚಿಸಿದರು.
ಕೆಲ ಉಸ್ತುವಾರಿ ಕಾರ್ಯದರ್ಶಿಗಳು ಠಾಕು-ಠೀಕಾಗಿ ಡ್ರೆಸ್ ಮಾಡಿಕೊಂಡು ಕಚೇರಿಗಳಲ್ಲಿ ಕೂರುತ್ತಾರೆ. ಜಿಲ್ಲೆಗಳಲ್ಲಿ ಪ್ರವಾಸ ಕೂಡ ಮಾಡೊಲ್ಲ ಅಂತಹ ಅಧಿಕಾರಿಗಳು ಅಂತಹ ಅಧಿಕಾರಿಗಳು ನಮಗೆ ಬೇಡ ಎಂದರು.
ಮುಂಗಾರು ಮಳೆ ಕ್ಷೀಣಿಸುತ್ತಿದೆ, ಜಲಾಶಯ ಪ್ರದೇಶಗಳ ಪರಿಸ್ಥಿತಿಯೂ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಅಗತ್ಯ ತುರ್ತು ಕಾರ್ಯಕ್ರಮಗಳನ್ನು ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. |