'ರೆಡ್ಡಿ ಸಹೋದರರ ಮೇಲಿನ ಮೊಕದ್ದಮೆ ವಾಪಸ್ ಪಡೆಯುವ ನಿರ್ಧಾರವನ್ನು ಸರ್ಕಾರ ಬದಲಿಸದಿದ್ದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಮೊಕದ್ದಮೆ ಹಿಂಪಡೆಯಬೇಕಿದ್ದರೆ, ಅದು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರಬೇಕು. ಅಥವಾ ಸಮಾಜಕ್ಕೆ ಉಪಯೋಗವಾಗಬೇಕು. ಆದರೆ ಯಡಿಯೂರಪ್ಪ ಸರ್ಕಾರ ಕುರ್ಚಿ ಉಳಿಸಿಕೊಳ್ಳಲು ಕೆಲವರ ಸ್ವಾರ್ಥಕ್ಕಾಗಿ ಸಂವಿಧಾನ, ಕಾನೂನಿನ ದುರಪಯೋಗ ಮಾಡುತ್ತಿದೆ ಎಂದು ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕಿಡಿಕಾರಿದರು.
ರಾಮಮಂದಿರ ಕಟ್ಟುವ ಮಂತ್ರ ಜಪಿಸುವ ಸರ್ಕಾರ, ಬಳ್ಳಾರಿ ಗಡಿ ಪ್ರದೇಶದಲ್ಲಿನ ಐತಿಹಾಸಿಕ ಸುಗ್ಗಲಮ್ಮ ದೇವಿ ದೇವಾಲಯ ಸ್ಫೋಟಿಸಿದ ಗಣಿಧಣಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ದ್ವಿಮುಖ ನೀತಿಗೆ ಇನ್ನೊಂದು ಉದಾಹರಣೆಯಷ್ಟೆ ಎಂದು ಟೀಕಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೆಲವು ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಹಣ ಹಾಗೇ ಉಳಿದಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆಪಾದಿಸಿದರು. |