ನಕಲು ಮಾಡಲು ಅವಕಾಶವಿಲ್ಲದ ಹಾಗೆ ಚಾಲನಾ ಪರವಾನಿಗೆ ಮತ್ತು ನೋಂದಣಿ ಪತ್ರ ನೀಡುವ ಸಾರಿಗೆ ಇಲಾಖೆಯ 'ಸ್ಮಾರ್ಟ್ ಕಾರ್ಡ್' ನೂತನ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು.
ಡಿಜಿಟಲ್ ರೂಪದಲ್ಲಿ ಮಾಹಿತಿ ಶೇಖರಣೆ ಮಾಡುವ 16ಎಂಬಿಯ ಚಿಪ್ ಅನ್ನು ಒಳಗೊಂಡಿರುವ ಇದು ಪ್ಲ್ಯಾಸ್ಟಿಕ್ ಕಾರ್ಡ್ ಆಗಿದ್ದು, ಅಳಿಸಲಾಗದ ಮಾಹಿತಿ, ಭದ್ರತೆ ನಿರ್ವಹಣೆ, ವಾಹನ ಹಾಗೂ ಚಾಲನಾ ಪರವಾನಿಗೆ ಪತ್ರಗಳ ಅಂಕಿ ಅಂಶಗಳನ್ನು ಒಳಗೊಂಡ ಗುರುತಿನ ಚೀಟಿಯೂ ಆಗಿದೆ.
ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಿಗೆ ನೀಡಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಒಂದು ಲಕ್ಷ ರೂಪಾಯಿ ಮರಣ ವಿಮೆ ಹಾಗೂ 50 ಸಾವಿರ ರೂಪಾಯಿ ಶಾಶ್ವತ ಅಂಗವಿಕಲತೆ ವಿಮೆ ಜಾರಿಯಲ್ಲಿರುತ್ತದೆ.
ಸ್ಮಾರ್ಟ್ ಕಾರ್ಡ್(ಡಿಎಲ್-ಆರ್‌ಸಿ) ಪಡೆಯಲು ನಿಗದಿತ ಅರ್ಜಿಯೊಂದಿಗೆ 200ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಚಾಲನೆಗೆ ಸಂಬಂಧಿಸಿದ ವ್ಯಕ್ತಿಯ ಮತ್ತು ವಾಹನದ ಸಮಗ್ರ ಮಾಹಿತಿ ಭರ್ತಿ ಮಾಡಿ, ಅರ್ಜಿದಾರ ಖುದ್ದಾಗಿ ಆರ್‌ಟಿಒ ಕಚೇರಿಗೆ ಹಾಜರಾಗಿ ಸ್ಮಾರ್ಟ್ ಕಾರ್ಡ್ ಪಡೆಯಬಹುದು.
ಪ್ರಸ್ತುತ ಇರುವ ಚಾಲನಾ ಪರವಾನಿಗೆ ಪತ್ರ ಮತ್ತು ನೋಂದಣಿ ಪುಸ್ತಕಗಳನ್ನು ಮುಂದಿನ ಎರಡು ವರ್ಷಗಳ ಒಳಗಾಗಿ ಸ್ಮಾರ್ಟ್ ಕಾರ್ಡ್‌ಗೆ ಪರಿವರ್ತಿಸಿಕೊಳ್ಳುವಂತೆ ಆರ್‌ಟಿಓ ಸೂಚಿಸಿದೆ. ಸಂಚಾರ ನಿಯಮ ಉಲ್ಲಂಘನೆಗಳನ್ನು ಕಾರ್ಡ್‌ನಲ್ಲಿ ಶೇಖರಿಸುವ ಸೌಲಭ್ಯವಿದ್ದು, 82ಲಕ್ಷ ವಾಹನಗಳು ಮತ್ತು 90ಲಕ್ಷ ವಾಹನ ಬಳಕೆದಾರರು ಈ ಯೋಜನೆಗೆ ಒಳಪಡಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರಿಗೆ ಸಚಿವ ಆರ್.ಅಶೋಕ್ ಅವರು ಸ್ಮಾರ್ಟ್ ಕಾರ್ಡ್ ಯೋಜನೆಗೆ ಗುರುವಾರ ಚಾಲನೆ ನೀಡಿದರು. |