ರಾಜ್ಯದ ಅಭಿವೃದ್ಧಿ ಮುಖ್ಯ, ಆ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ರೆಸಾರ್ಟ್‌ನಲ್ಲಿ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದೆಯೇ ವಿನಃ ಮಜಾ ಮಾಡೋಕೆ ರೆಸಾರ್ಟ್‌ಗೆ ಹೋಗ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳ ಆರೋಪಕ್ಕೆ ಕಿಡಿಕಾರಿದ ಪರಿ ಇದು.ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ, ಇಂತಹ ಸಂದರ್ಭದಲ್ಲಿ ಮೋಜು ಮಾಡಲು ರೆಸಾರ್ಟ್‌ಗೆ ಹೋಗುತ್ತಾರೆ. ಅಲ್ಲಿ ಚರ್ಚೆ ಮಾಡುವುದನ್ನು ವಿಧಾನಸೌದಲ್ಲೇ ಮಾಡಬಹುದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಗುರುವಾರ ಯಡಿಯೂರಪ್ಪ ಅವರ ಪ್ರಗತಿ ಪರಿಶೀಲನಾ ಸಭೆ ವಿರುದ್ಧ ಟೀಕಾ ಪ್ರಹಾರ ಹರಿಸಿದ್ದರು.ರೆಸಾರ್ಟ್‌ನಲ್ಲಿ ಸಭೆ ನಡೆಸುವ ಔಚಿತ್ಯವಾದರೂ ಏನು? ಸಭೆಗಳನ್ನು ನಡೆಸಲು ವಿಧಾನಸೌಧ, ವಿಕಾಸಸೌಧ ಇಲ್ಲವೇ? ಇವೆಲ್ಲವನ್ನೂ ಬಿಟ್ಟು ರೆಸಾರ್ಟ್‌ನಲ್ಲಿ ಸಭೆ ನಡೆಸಿದರೆ ಎಲ್ಲವೂ ಬಗೆಹರಿಯುತ್ತದೆಯೇ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪ್ರಶ್ನಿಸಿದ್ದರು.ಪ್ರತಿಪಕ್ಷ ನಾಯಕರ ಟೀಕೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳು ಯಾವತ್ತಾದರೂ ನಮ್ಮ ಕೆಲಸವನ್ನು ಹೊಗಳಿದ್ದಾರಾ ಎಂದು ಪ್ರಶ್ನಿಸಿ, ನಾವು ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ನಡೆಸುತ್ತೆವೆಯೇ ಹೊರತು, ಮಜಾ ಮಾಡ್ಲಿಕ್ಕೆ ರೆಸಾರ್ಟ್‌ಗೆ ಹೋಗಿಲ್ಲ ಎಂದು ಹರಿಹಾಯ್ದರು.ಈ ಹಿಂದೆ ಆಡಳಿತ ನಡೆಸಿದ್ದ ಇವರೆಲ್ಲ ಏನು ಮಾಡಿದ್ದಾರೆ ಎಂಬುದನ್ನು ನಾವು ಕೂಡ ಸದನದಲ್ಲಿ ತಕ್ಕ ಉತ್ತರ ನೀಡಲು ಸಮಯಾವಕಾಶ ಇದೆ. ಸುಮ್ಮನೆ ಟೀಕೆ ಮಾಡುವುದಷ್ಟೇ ಪ್ರತಿಪಕ್ಷಗಳ ಕೆಲಸವಾಗಿಬಿಟ್ಟಿದೆ ಎಂದು ಹೇಳಿದರು. |