ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಪುರಾತನ ದೇವಾಲಯ ಒಡೆದ ಅಥವಾ ಗಣಿಗಾರಿಕೆ ಕುರಿತ ಕೇಸ್ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯನವರ ಮೇಲಿನ ಪ್ರಕರಣವನ್ನು ಸರ್ಕಾರ ಹಿಂಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ಧರಾಮಯ್ಯ ಅವರ ವಿರುದ್ಧ ದಾಖಲಾಗಿದ್ದುದು ರಾಜಕೀಯ ಘಟನೆಗೆ ಸಂಬಂಧಿಸಿದ ಪ್ರಕರಣವೇ ಹೊರತು ಕ್ರಿಮಿನಲ್ ಕೇಸ್ ಅಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರ್ಕಾರವೇ ಕೇಸು ಹಾಕಿ, ಕ್ರಮ ಕೈಗೊಂಡು ಅದೇ ಸರ್ಕಾರ ಪ್ರಕರಣವನ್ನು ವಾಪಸ್ ಪಡೆದ ನಿದರ್ಶನ ಯಡಿಯೂರಪ್ಪ ಅವರ ಸರ್ಕಾರ ಹೊರತು ಪಡಿಸಿದರೆ ಇನ್ಯಾವ ಸರ್ಕಾರದಲ್ಲೂ ಸಿಗದು ಎಂದು ಅವರು ವ್ಯಂಗ್ಯವಾಡಿದರು.
ಇದೇ ವೇಳೆ ಯಡಿಯೂರಪ್ಪನವರು ರೆಸಾರ್ಟ್‌ನಲ್ಲಿ ನಡೆಸುತ್ತಿರುವ ಸರ್ಕಾರದ ಪ್ರಗತಿ ಪರಿಶೀಲನಾ ಸಭೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಯಡಿಯೂರಪ್ಪನವರಿಗೆ ವಿಶ್ರಾಂತಿ ಬೇಕಿದ್ದರೆ ರೆಸಾರ್ಟ್‌ನಲ್ಲಿ ತಂಗಲಿ. ಅದು ಬಿಟ್ಟು, ಸರ್ಕಾರಿ ಸಭೆಯನ್ನೆಲ್ಲಾ ಅಲ್ಲೇಕೆ ನಡೆಸಬೇಕು. ವಿಧಾನಸೌಧ, ವಿಕಾಸಸೌಧ ಅಥವಾ ಇನ್ಯಾವುದೇ ಸರ್ಕಾರ ಕಟ್ಟಡಗಳಲ್ಲಿ ಜಾಗ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. |