ಬಳ್ಳಾರಿ ಗಣಿ ಧಣಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಕೇಸ್‌ಗಳನ್ನು ವಾಪಸು ಪಡೆದಿರುವ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿರುವ ವಿಧಾನಪರಿಷತ್ ಪರಿಷತ್ ನಾಯಕ ವಿ.ಎಸ್. ಉಗ್ರಪ್ಪ, ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಹಾಗೂ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಹಿಂತೆಗೆದುಕೊಳ್ಳಲು ಕಾರಣವೇನು ಎಂಬ ಬಗ್ಗೆ ಮುಖ್ಯಮಂತ್ರಿಯವರು ಜನತೆಗೆ ವಿವರಿಸಬೇಕು. ಇಲ್ಲದಿದ್ದರೆ ವಿಧಾನಮಂಡಳದ ಒಳಗೆ ಹಾಗೂ ಹೊರಗೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿಯಲ್ಲಿ 3 ಶತಮಾನದ ಹಳೆಯದಾದ ಸುಗ್ಗಲಮ್ಮ ದೇವಾಲಯದ ನೆಲಸಮ ಪ್ರಕರಣವನ್ನು ಹಿಂತೆಗೆದುಕೊಳ್ಳಬಾರದು ಎಂದು ಆಗ್ರಹಿಸಿರುವ ಅವರು, ಈ ಬಗ್ಗೆ ಸರ್ಕಾರಿ ಅಭಿಯೋಜನಕರೇ ವರದಿ ನೀಡಿದ್ದರೂ, ಅದನ್ನು ನಿರ್ಲಕ್ಷ್ಯಿಸಿ ಪ್ರಕರಣ ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಒಟ್ಟು 16 ಪ್ರಕರಣಗಳಲ್ಲಿ 11 ಪ್ರಕರಣಗಳು ಕಳೆದ ವಿಧಾನಸಭಾ ಚುನಾವಣೆ ಹಾಗೂ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟದ್ದಾಗಿದೆ ಎಂದು ಅವರು ವಿವರಿಸಿದ್ದಾರೆ. |