ಒಂದು ಕಡೆ ಮುಂಗಾರು ಮಳೆ ಕ್ಷೀಣಿಸಿದಂತೆ ಇತ್ತ ರಾಜ್ಯದಲ್ಲಿ ವಿದ್ಯುತ್ ಅಭಾವ ಎದುರಾಗಿದೆ. ಮಳೆ ಇಲ್ಲದೆ ಜಲಾಶಯ ಬರಿದಾಗಿರುವುದು ಮತ್ತು ಕೇಂದ್ರ ಗ್ರೀಡ್‌ನಿಂದ ನಿಗದಿತ ವಿದ್ಯುತ್ ಪೂರೈಕೆ ಆಗದಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೆ ಬರುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.
ಇದನ್ನು ಖಚಿತ ಪಡಿಸಿರುವ ಕೆಪಿಟಿಸಿಎಲ್ ಉನ್ನತ ಮೂಲದ ಅಧಿಕಾರಿಗಳು, ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮುಂದುವರಿಸಲಾಗಿದ್ದು, ಇಂದಿನಿಂದ ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಪ್ರಮಾಣ ತೀರಾ ಕುಸಿದಿದೆ. ಕೇಂದ್ರ ಗ್ರೀಡ್‌ನಿಂದ ಬರಬೇಕಾಗಿದ್ದ 1543 ಮೆಗಾವ್ಯಾಟ್ ವಿದ್ಯುತ್‌ಗಿಂತ ಕಡಿಮೆ ವಿದ್ಯುತ್ ರಾಜ್ಯಕ್ಕೆ ಬರುತ್ತಿದೆ. ಅಲ್ಲದೆ, ರಾಮಗುಂಡಂನಿಂದ ಬರಬೇಕಿದ್ದ 135 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಈ ನಡುವೆ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುವ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಇಲ್ಲ ಎಂದು ತಿಳಿಸಿರುವ ಸಚಿವರು, ಬಳ್ಳಾರಿ ಘಟಕವೊಂದರಲ್ಲಿ ವಿದ್ಯುತ್ ಸ್ಥಗಿತಗೊಂಡಿರುವುದು ಹಾಗೂ ಕೇಂದ್ರದಿಂದ ಕಡಿಮೆ ವಿದ್ಯುತ್ ಬಂದಿರುವುದು ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಘಟಕಗಳು ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. |