ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿರುವವರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ, ಒರಿಸ್ಸಾ ಹಾಗೂ ಗುಜರಾತ್ ರಾಜ್ಯಗಳ ಮಾದರಿಯಲ್ಲಿ ರಾಜ್ಯದಲ್ಲೂ ಯಡಿಯೂರಪ್ಪ ನೇತೃತ್ವದ ಸರ್ಕಾರ ಮತಾಂತರ ತಡೆ ಕಾನೂನನ್ನು ರೂಪಿಸಿ, ಜಾರಿಗೊಳಿಸುವಂತೆ ಪ್ರಮುಖ ಹಿಂದೂ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಖ್ಯಾತ ಸಂಶೋಧಕ ಎಂ.ಚಿದಾನಂದ ಮೂರ್ತಿ, ಎಂಎಲ್‌ಸಿ ಎಸ್.ಆರ್, ಲೀಲಾ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ನರಹರಿ, ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎಂ.ಸಿ.ಜಯದೇವ್, ವಿಶ್ವಹಿಂದೂ ಪರಿಷತ್ ಪ್ರಾಂತೀಯ ಕಾರ್ಯದರ್ಶಿ, ಬಿ.ಎನ್.ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಕ್ರೈಸ್ತ ಮಿಷನರಿಗಳ ಮತಾಂತರ ಪ್ರಕ್ರಿಯೆಯಿಂದ ಹಿಂದೂ ಧರ್ಮದ ಅವನತಿ ಹೊಂದುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಪ್ರತಿಪಾದಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು, ಮತಾಂತರ ತಡೆ ಕಾನೂನು ರಚಿಸುವ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು. ಸರ್ಕಾರಕ್ಕೆ ಈ ಬಗ್ಗೆ ಈಗಾಗಲೇ ಮನವಿ ಸಲ್ಲಿಸಿದ್ದರೂ, ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಇದು ಹೀಗೆಯೇ ಮುಂದುವರಿದಲ್ಲಿ ಹಿಂದೂ ಧರ್ಮ ಅವನತಿಯಾಗಲಿದೆ ಎಂದು ದೂರಿದರು.
ಮೇಘಾಲಯ, ನಾಗಲ್ಯಾಂಡ್, ತ್ರಿಪುರಾ, ಮಣಿಪುರ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಶೇ.80ರಷ್ಟು ಹಿಂದೂ ಧರ್ಮದವರು ಮತಾಂತರಗೊಳ್ಳುತ್ತಿದ್ದು, ವಿದೇಶಿಯರಂತೆ ವರ್ತಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. |