ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ವ್ಯವಸ್ಥೆಯನ್ನು ರದ್ದು ಮಾಡಿ ದೇಶಾದ್ಯಂತ ಏಕರೂಪ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂಬ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಗಳನ್ನು ರದ್ದು ಮಾಡಿ ಅಖಿಲ ಭಾರತ ಮಟ್ಟದಲ್ಲಿ ಒಂದೇ ಪ್ರೌಢಶಾಲಾ ಮಂಡಳಿ ಸ್ಥಾಪಿಸಬೇಕೆಂಬ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರ ಪ್ರಸ್ತಾವನೆಗೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಂಥ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ಆಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ಅಸ್ತಿತ್ವದಲ್ಲಿರುವುದು ಅಗತ್ಯವಿದೆ. ಆದರೆ ಪಠ್ಯ ಕ್ರಮದಲ್ಲಿ ಸುಧಾರಣೆ ಮಾಡುವ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ನಾವು ಸಿದ್ದರಿದ್ದೇವೆ ಎಂದರು.
ನಾವಿನ್ನು ಅಕ್ಷರಾಭ್ಯಾಸ ಶಿಕ್ಷಣ ವ್ಯವಸ್ಥೆಯಲ್ಲಿ ಇದ್ದೇವೆ. ಬೌದ್ಧಿಕ ಸಾಮರ್ಥ್ಯದ ವೃದ್ಧಿ ಹಂತಕ್ಕಿನ್ನು ತಲುಪಿಲ್ಲ, ಎಷ್ಟೋ ಕುಟುಂಬಗಳಲ್ಲಿ ಮೊದಲ ಪೀಳಿಗೆಯವರು ಅಕ್ಷರಾಭ್ಯಾಸ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಅವರು ಗಮನಹರಿಸಿದರೆ ಒಳ್ಳೆಯದು ಎಂದು ಕಾಗೇರಿ ಹೇಳಿದರು. |