ಇತ್ತೀಚೆಗೆ ನಗರದಲ್ಲಿ ನಡೆದ ಪಾಲಿಕೆ ನೌಕರರ ಬಾಡೂಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ನೌಕರರ ಕೇಂದ್ರೀಯ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮತ್ತು ಖಚಾಂಚಿ ಸಿ.ನಾಗರಾಜ್ ವಿರುದ್ಧ ಬಿಬಿಎಂಪಿ ನೌಕರರ ಕನ್ನಡ ಸಂಘಗಳ ಒಕ್ಕೂಟ ಲೋಕಾಯುಕ್ತರಿಗೆ ದೂರು ನೀಡಿದೆ.
ದಾಖಲೆ ಮೊತ್ತದ ಆಸ್ತಿ ತೆರಿಗೆ ಸಂಗ್ರಹವಾದ ಹಿನ್ನೆಲೆಯಲ್ಲಿ ಬಾಡೂಟ ಹಾಕಿಸಲಾಗಿದೆ. ಬಿಬಿಎಂಪಿ ಕೇಂದ್ರೀಯ ನೌಕರರ ಸಂಘದಲ್ಲಿ ಅತ್ಯಲ್ಪ ಮೊತ್ತದ ಹಣವಿದೆ. ಆದರೆ ಬಾಡೂಟ ಕಾರ್ಯಕ್ರಮಕ್ಕೆ 25ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಭ್ರಷ್ಟಾಚಾರ ನಡೆಸಿರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಲಾಗಿದೆ.
ಇದೇ 22ರಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರನ್ನು ಭೇಟಿ ಮಾಡಿ ದೂರು ನೀಡಿರುವ ಬಿಬಿಎಂಪಿ ಒಕ್ಕೂಟದ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿ ಬಾಬು ಈ ಕುರಿತ ದಾಖಲೆಗಳನ್ನೂ ಸಲ್ಲಿಸಿದ್ದಾರೆ. |