' ತನಿಖೆಗಳಿಗೆ ನಮ್ಮಪ್ಪನೂ (ಎಚ್.ಡಿ.ದೇವೇಗೌಡ) ಹೆದರಿಲ್ಲ ನಾನೂ ಹೆದರುವುದಿಲ್ಲ. ಅಧಿಕಾರದ ಆಸೆಗೆ ಹಲ್ಲುಗಿಂಜುವ ಜಾಯಮಾನ ನನ್ನದಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಲೋಕೋಪಯೋಗಿ ಮತ್ತು ಇಂಧನ ಸಚಿವರಾಗಿದ್ದಾಗ ನೇಮಕಾತಿಯಲ್ಲಿ ಅವ್ಯವಹಾರ ಮತ್ತು ಪಕ್ಷಪಾತ ನಡೆದಿದೆ ಎಂಬ ಆರೋಪದ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸುತ್ತಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೆ ಮುಖ್ಯಮಂತ್ರಿಯವರ ಗುಪ್ತದಳ ಹಾಸನಕ್ಕೆ ಬಂದು ಈಗಾಗಲೇ ತನಿಖೆ ಮಾಡಿಕೊಂಡು ಹೋಗಿದೆ. ಮತ್ತೊಮ್ಮೆ ಲೋಕಾಯುಕ್ತ ತನಿಖೆಯನ್ನು ಮಾಡಲಿ. ಅದಕ್ಕೆಲ್ಲಾ ಅಂಜುವನಲ್ಲ ನಾನು. ಲೋಕೋಪಯೋಗಿ ಮತ್ತು ಇಂಧನ ಸಚಿವನಾಗಿದ್ದಾಗ ಪ್ರಾಮಾಣಿಕ, ಪಾರದಕ್ಷತೆ ಮತ್ತು ದಕ್ಷತೆಯಿಂದ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಗಣಿದಣಿಗಳ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆದ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲಿನ ಮೊಕದ್ದಮೆಗಳನ್ನು ವಾಪಸ್ ತೆಗೆದುಕೊಂಡಿದೆ. ಸರ್ಕಾರದ ಈ ಎಲ್ಲಾ ಕ್ರಮವನ್ನು ನೋಡಿದರೆ ಪ್ರತಿಪಕ್ಷದವರ ಬಾಯಿ ಮುಚ್ಚಿಸುವ ತಂತ್ರ ನಡೆಯುತ್ತಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ. ರಾಜಕಾರಣಿಗಳ ಮೇಲಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯುವ ಸರ್ಕಾರ ರೈತ ಸಂಘದ ಕಾರ್ಯಕರ್ತರು ಮತ್ತು ಇತರೆ ಹೋರಾಟಗಾರರ ಮೇಲಿರುವ ಮೊಕದ್ದಮೆಗಳನ್ನು ಏಕೆ ವಾಪಸ್ ಪಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ರೆಸಾರ್ಟ್‌ನಲ್ಲಿ ರಾಜ್ಯದ ಪ್ರಗತಿ ಪರಿಶೀಲನೆ ಸಮಾಲೋಚನೆ ಸಭೆಯನ್ನು ನಡೆಸುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಪಾರದರ್ಶಕ ರಾಜಕಾರಣ ಮಾಡುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದ ಅವರು, ಎಚ್.ಡಿ.ಕುಮಾರಸ್ವಾಮಿ ಅವರನ್ನು ರೆಸಾರ್ಟ್ ರಾಜಕಾರಣಿ ಎಂದು ಕರೆಯುತ್ತಿದ್ದರು ಈಗ ಇವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದ್ದಾರೆ. |