ಬೆಂಗಳೂರು ವಿಶ್ವವಿದ್ಯಾಲಯ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ನಡೆಸಿದ ದ್ವಿತೀಯ ಬಿಕಾಂ ಪರೀಕ್ಷೆಯ ಪ್ರಶ್ನೆಯ ಪತ್ರಿಕೆ ಬಯಲು ಪ್ರಕರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಭಾಗಿಯಾಗಿದ್ದಾರೆಂಬ ಡಿಕೆಶಿ ಆರೋಪವನ್ನು ತಳ್ಳಿಹಾಕಿರುವ ಎಬಿವಿಪಿ, ಡಿಕೆಶಿ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿದೆ.
ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಎಬಿವಿಪಿಗೆ ಕಳಂಕ ತರುವ ಆರೋಪ ಹೊರಿಸಿದೆ ಎಂದು ದೂರಿದ್ದು, ಡಿಕೆಶಿಯವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದೆ, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ಕೂಡ ನೀಡಿದೆ.
ಇತ್ತೀಚೆಗಷ್ಟೇ ಬೆಂಗಳೂರು ವಿವಿ ದ್ವಿತೀಯ ಬಿಕಾಂ ಸಪ್ಲಿಮೆಂಟರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲಿನ ಸಂಚಿನಲ್ಲಿ ಎಬಿವಿಪಿ ಭಾಗಿ ಎಂಬ ಕಾಂಗ್ರೆಸ್ ಆರೋಪವನ್ನು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ತಳ್ಳಿಹಾಕಿ, ಇದರ ಹಿಂದೆ ರಾಜಕೀಯ ಕೈವಾಡ ಇದೆ ಎಂದು ದೂರಿದ್ದರು.
'ಇದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ ನೇತೃತ್ವದ ದೊಂಬರಾಟ ಎಂದು ಲೇವಡಿ' ಮಾಡಿದ್ದರು. ಅಲ್ಲದೇ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಆರೋಪಿಗಳು ದೂರು ದಾಖಲಾದ ನಂತರ ನಾಪತ್ತೆಯಾಗಿದ್ದಾರೆ. ಹಾಗಾದರೆ ಆರೋಪಿಗಳು ಎಲ್ಲಿ?ಎಂದು ಖಾರವಾಗಿ ಪ್ರಶ್ನಿಸಿ, ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದರು.
ಸಿಕ್ಕಿಬಿದ್ದಿರುವ ಆರೋಪಿಗಳು ನಾಪತ್ತೆಯಾಗಿರುವುದು ಅನೇಕ ಸಂಶಯಕ್ಕೆ ಕಾರಣವಾಗಿದೆ. ವೇವಾ ಕಾಲೇಜನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದರ ಸಮಗ್ರ ತನಿಖೆಗೆ ಸೂಚಿಸಲಾಗಿದೆ ಎಂದಿದ್ದರು. ಇದೀಗ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. |