ಲೋಕಸಭೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಇದೀಗ ವಿಶ್ರಾಂತಿಗಾಗಿ ನಿಸರ್ಗ ರಮಣೀಯ ತಾಣವಾದ ಕೊಡಗಿಗೆ ಆಗಮಿಸಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಶುಕ್ರವಾರ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.
ಲೋಕಸಭಾ ವಿಪಕ್ಷ ನಾಯಕ, ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡ ಎಲ್.ಕೆ. ಅಡ್ವಾಣಿ ಮತ್ತು ಅವರ ಪತ್ನಿ ಕಮಲಾ ಅಡ್ವಾಣಿ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ಐದು ದಿನಗಳ ಕಾಲ ಕುಟುಂಬ ವರ್ಗದೊಂದಿಗೆ ವಿಶ್ರಾಂತಿಗಾಗಿ ಆಗಮಿಸಿರುವ ಆಡ್ವಾಣಿಯವರು ಕಾದಂಬರಿ ಓದುವುದು, ಕೊಡವರ ಸಾಂಪ್ರದಾಯಿಕ ಊಟದ ಸವಿ, ಪ್ರಕೃತಿ ವೀಕ್ಷಣೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಕೊಡವರ ಉಡುಗೆ ಧರಿಸಿದ್ದ ಅಡ್ವಾಣಿ ಮತ್ತು ಅವರ ಪತ್ನಿ ಅಪ್ಪಟ ಕೊಡವರಂತೆ ಕಂಡು ಬಂದು ಕೆಲ ಕಾಲ ಅದೇ ಉಡುಪಿನಲ್ಲಿ ರೆಸಾರ್ಟ್ ಸುತ್ತಮುತ್ತಲು ಸುತ್ತಾಡಿ ಸಂಭ್ರಮಿಸಿದ್ದಾರೆ. ಹಾಗೆ ಕೊಡವರ ಉಡುಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ರೆಸಾರ್ಟ್‌ಗೆ ಭೇಟಿ ನೀಡುವ ಗಣ್ಯ ವ್ಯಕ್ತಿಗಳು ತಮ್ಮ ಭೇಟಿ ನೆನಪಿಗಾಗಿ ರೆಸಾರ್ಟ್ ಆವರಣದಲ್ಲಿ ಕುಕುಂ ಗಿಡ ನೆಡುವುದು ನೆಟ್ಟ ಗಿಡಕ್ಕೆ ತಮ್ಮದೇ ಹೆಸರಿಡುವುದು ಕೊಡಗಿನ ಸಂಪ್ರದಾಯವಾಗಿದ್ದು, ಈ ಹಿಂದೆ ರಜನೀಕಾಂತ್, ಅಮಿತಾಬಚ್ಚನ್ , ಮಮ್ಮುಟ್ಟಿ ಮುಂತಾದವರು ಭೇಟಿ ನೀಡಿ ಗಿಡ ನೆಟ್ಟಿದ್ದಾರೆ. ಈಗ ಅವುಗಳೊಂದಿಗೆ ಅಡ್ವಾಣಿ ನೆಟ್ಟ ಗಿಡ ಹೊಸ ಸೇರ್ಪಡೆಯಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಡ್ವಾಣಿ ಅವರನ್ನು ಶನಿವಾರ ಮಧ್ಯಾಹ್ನ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. |