ಬೀದರ್ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸೋಲುಂಡ ಗುರುಪಾದಪ್ಪ ನಾಗಮಾರಪಳ್ಳಿ, ಮಾಜಿ ಮುಖ್ಯಮಂತ್ರಿ, ಸಂಸದ ಧರಂಸಿಂಗ್ ವಿರುದ್ಧ ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠದಲ್ಲಿ ಮೊಕದ್ದಮೆ ಹೂಡಿದ್ದಾರೆ.ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಧರಂಸಿಂಗ್ ಅವರು ಮತಯಂತ್ರಗಳಲ್ಲಿ ವಿದೇಶದಿಂದ ತಂದ ಮೈಕ್ರೋ ಚಿಪ್ ಬಳಸಿ ಅಕ್ರಮ ನಡೆಸಿದ್ದಾರೆಂದು ದೂರಿ ನಾಗಮಾರಪಳ್ಳಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರಲ್ಲಿ ಚುನಾವಣಾಧಿಕಾರಿಯೂ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಬೀದರ್ ಉಪಚುನಾವಣೆಯಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಕೂಡ ಕಾಂಗ್ರೆಸ್ ಶಾಸಕ ರಹೀಂಖಾನ್ ವಿರುದ್ಧ ಗುಲ್ಬರ್ಗ ಸಂಚಾರಿಪೀಠದಲ್ಲಿ ದಾವೆ ಹೂಡಿದ್ದಾರೆ.ಜೇವರ್ಗಿ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಎನ್.ಧರಂಸಿಂಗ್ ಅವರು, ಕಾಂಗ್ರೆಸ್‌ನಿಂದ ಬೀದರ್ ಲೋಕಸಭೆ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ಗುರುಪಾದಪ್ಪ ನಾಗಮಾರಪಳ್ಳಿ, ಬೀದರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದರು.ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಗಮಾರಪಳ್ಳಿ 2,98,338 ಮತ ಪಡೆದು ಸೋಲುಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಧರಂಸಿಂಗ್ 3,37,957ಮತ ಪಡೆದು ಗೆಲುವು ಸಾಧಿಸಿದ್ದರು. ಅದೇ ರೀತಿ ಬೀದರ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ್ ವಿರುದ್ಧ ಕಾಂಗ್ರೆಸ್‌ನ ರಹೀಂಖಾನ್ ಗೆಲುವು ಸಾಧಿಸಿದ್ದರು.ಲೋಕಸಭೆ ಮತ್ತು ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಪ್ರಭಾವದಿಂದ ಗೆಲುವು ಸಾಧಿಸಿದೆ ಎಂದು ನಾಗಮಾರಪಳ್ಳಿ ಆ ಸಂದರ್ಭದಲ್ಲಿ ಆರೋಪಿಸಿದ್ದರು. |