ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರಲು ಕಾರಣವಾಗುತ್ತಿದೆ, ಅಧಿಕಾರಿಗಳ ಈ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಗುಡುಗಿದ್ದಾರೆ.
ನಗರದ ಹೊರವಲಯದ ಐಷಾರಾಮಿ ರೆಸಾರ್ಟ್‌ನಲ್ಲಿ ಶನಿವಾರ ನಡೆದಿರುವ ಸಚಿವರು ಹಾಗೂ ಅಧಿಕಾರಿಗಳ ಮಂಥನ-2 ಸಭೆಯಲ್ಲಿ ಆರಂಭಿಕವಾಗಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳಿಗಿರುವಷ್ಟೇ ಜವಾಬ್ದಾರಿ, ಅಧಿಕಾರಿಗಳಿಗೂ ಇದೆ. ಹಾಗಾಗಿ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ತಾಳದೆ ಮನಸ್ಸಿಟ್ಟು ಕೆಲಸ ಮಾಡಬೇಕು ಎಂದರು.
ಸಚಿವರು ಹಾಗೂ ಅಧಿಕಾರಿಗಳು ಸೇರಿದಂತೆ ಎಲ್ಲರೂ ನಮ್ಮ ಕರ್ತವ್ಯಗಳನ್ನು ಅರಿತು ಒಟ್ಟಾಗಿ ಮಾದರಿ ಕರ್ನಾಟಕ ನಿರ್ಮಾಣಕ್ಕೆ ಕಂಕಣ ಬದ್ದರಾಗಿ ದುಡಿಯೋಣ ಎಂದು ಸಭೆಯಲ್ಲಿ ಮನವಿ ಮಾಡಿದರು.
ಅಲ್ಲದೇ ಸಾರ್ವಜನಿಕರ ಜೊತೆ ಅಧಿಕಾರಿಗಳು ಸೌಜನ್ಯಯುತವಾಗಿ ನಡೆದುಕೊಳ್ಳಲು ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಪರಾಧಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡುವಂತೆ ಸಭೆಯಲ್ಲಿ ಸೂಚಿಸಿದ ಮುಖ್ಯಮಂತ್ರಿಗಳು, ಅಪರಾಧ ನಿಯಂತ್ರಣ ಹಾಗೂ ಕಳವು ಮಾಲುಗಳ ವಶ, ತ್ವರಿತ ವಿಲೇವಾರಿ ಮಾಡುವ ಠಾಣಾಧಿಕಾರಿಗಳಿಗೆ ಪ್ರೋತ್ಸಾಹಧನ ನೀಡುವಂತೆ ಸಲಹೆ ನೀಡಿದರು. |