ಹೆಚ್ಚಿನ ಬಡ್ಡಿ ಕೊಡುವುದಾಗಿ ಸಾರ್ವಜನಿಕರಿಗೆ ಆಮೀಷ ಒಡ್ಡಿ ಸುಮಾರು 25 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಪರಾರಿಯಾಗಿದ್ದ ನಾಲ್ಕು ಮಂದಿ ವಂಚಕರನ್ನು ಬಂಧಿಸುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರದ ಪೊಲೀಸ್ ಆಯುಕ್ತ ಶಂಕರ ಬಿದರಿ, ಹೆಚ್. ಆರ್. ಪ್ರಭಾಕರನ್ ಈ ವಂಚನೆ ಪ್ರಕರಣದ ಮುಖ್ಯ ರೂವಾರಿಯಾದರೆ, ರಾಧಾಮಣಿ, ವೆಂಕಟೇಶ್ ಪ್ರಸಾದ್ ಮತ್ತು ಆನಂದ್ ಇನ್ನುಳಿದ ಆರೋಪಿಗಳು ಎಂದು ತಿಳಿಸಿದ್ದಾರೆ.
ಫೋಸೈನ್ಸ್ ಮತ್ತು ಐನಾಕ್ಸ್ ಕಂಪನಿಗಳನ್ನು ಆರಂಭಿಸಿ ಆ ಕಂಪನಿಯಲ್ಲಿ ಹಣ ಹೂಡುವವರಿಗೆ ಹೆಚ್ಚಿನ ಬಡ್ಡಿ ಕೊಡುವುದಾಗಿ ಸಾರ್ವಜನಿಕರಿಗೆ ಆಮಿಷ ಒಡ್ಡಿ ಒಟ್ಟು 25 ಕೋಟಿ ಹಣ ಸಂಗ್ರಹ ಮಾಡಿ ಪರಾರಿಯಾಗಿದ್ದರು ಎಂದು ಬಿದರಿ ವಿವರಿಸಿದ್ದಾರೆ.
ಈ ಆರೋಪಿಗಳು ಬೆಂಗಳೂರಿನಲ್ಲಿ ಅಲ್ಲದೆ ಮುಂಬೈನಲ್ಲೂ ಕೂಡ ಕಚೇರಿ ಆರಂಭಿಸುವುದಾಗಿ ಹೇಳಿ ಸಾರ್ವಜನಿಕರಿಂದ 60 ಲಕ್ಷ ರೂಪಾಯಿಗಳನ್ನು ಸಂಗ್ರಹ ಮಾಡಿದ್ದಾರೆ.
ಸುಮಾರು 25 ಕೋಟಿ ಸಂಗ್ರಹ ಮಾಡಿ ಪಂಚತಾರಾ ಹೋಟೆಲ್‌ನಲ್ಲಿ ಐಶಾರಾಮಿ ಜೀವನ ಸಾಗಿಸುತ್ತಿದ್ದರು. ಅಲ್ಲದೆ 1 ಕೋಟಿ ಬೆಲೆ ಬಾಳುವ ಖಾಲಿ ನಿವೇಶನಗಳನ್ನು ಖರೀದಿ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 17 ಲಕ್ಷ ಬೆಲೆಯ ಫೋರ್ಡ್ ಕಾರು, 6 ಕಂಪ್ಯೂಟರ್, 2 ಲ್ಯಾಪ್‌ಟಾಪ್, 5 ಲಕ್ಷ ನಗದು ಹಣ ಹಾಗೂ 1 ಕೋಟಿ 40 ಲಕ್ಷ ರೂ.ಗಳ ಇತರೆ ವಸ್ತುಗಳನ್ನು ವಂಚಿತರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. |