ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಖ್ಯಾತ ನಟ ಅರ್ಜುನ ಸರ್ಜಾ ಅವರ ಅಣ್ಣ ಕಿಶೋರ್ ಸರ್ಜಾ ಅವರು ನಗರದ ತಮ್ಮ ನಿವಾಸದಲ್ಲಿ ಶನಿವಾರ ಹೃದಯಾಘಾತದಿಂದ ನಿಧನರಾದರು.
ಅರ್ಜುನ್ ಅವರ ಸಹೋದರರಾದ ಕಿಶೋರ್ ಸರ್ಜಾ(50ವ) ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರ್ಜಾ ಬೆಳಿಗ್ಗೆ 8ಗಂಟೆ ಸುಮಾರಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಶಕ್ತಿ ಪ್ರಸಾದ್ ಅವರ ಹಿರಿಯ ಪುತ್ರರಾಗಿರುವ ಕಿಶೋರ್ ಸರ್ಜಾ ಅವರು ಪತ್ನಿ, ಪುತ್ರ ಸೂರಜ್, ಸಹೋದರ ಅರ್ಜುನ್ ಸರ್ಜಾ, ಸಹೋದರಿ ಅಮ್ಮಾಜಿ ಅವರನ್ನು ಅಗಲಿದ್ದಾರೆ.
ರಾಜೇಂದ್ರ ಬಾಬು, ಡಿ.ರಾಜೇಂದ್ರ ಬಾಬು, ವಿಜಯ ರೆಡ್ಡಿ, ಸೋಮಶೇಖರ್ ಅವರ ಬಳಿ ಸಹ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ ಕಿಶೋರ್ ಸರ್ಜಾ, ರವಿಚಂದ್ರನ್ ಅವರ ಬಳಿ ಕೆಲಸ ಮಾಡಿದ ನಂತರ ಸ್ವಂತ ನಿರ್ದೇಶಕರಾದರು. ಅಲ್ಲಿಂದ ಅಳಿಮಯ್ಯ, ಮಕ್ಕಳ ಸಾಕ್ಷಿ, ಭಾವಭಾವೈದ, ಸುತ್ತಮುತ್ತ ಜೋಡಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಅಳಿಮಯ್ಯ, ಸುತ್ತಮುತ್ತ ಚಿತ್ರಗಳ ಯಶಸ್ಸು ಅವರನ್ನು ಸ್ಯಾಂಡಲ್‌ವುಡ್‌ನ ಅತ್ಯುತ್ತಮ ನಿರ್ದೇಶಕ ಎಂಬ ಖ್ಯಾತಿ ಪಡೆಯಲು ಕಾರಣವಾಗಿದ್ದವು.
ಕಿಶೋರ್ ಸರ್ಜಾ ಅವರ ಮೃತದೇಹವನ್ನು ಕೆ.ಆರ್.ರಸ್ತೆಯ ಶಾಸ್ತ್ರಿ ನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು ನಂತರ ಸಂಜೆ ಸ್ವಗ್ರಾಮ ಮಧುಗಿರಿ ಬಳಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ, |