ಸಚಿವ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆದಿರುವ ಸರ್ಕಾರದ ಕ್ರಮವನ್ನು ವಿಧಾನಸಭೆಯಲ್ಲಿ ಪ್ರಶ್ನಿಸುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಡ್ಡಿ ವಿರುದ್ಧದ ಪ್ರಕರಣಗಳಲ್ಲಿ ಒಂದೂ ಸಾರ್ವಜನಿಕ ಹಿತಾಸಕ್ತಿ ಪ್ರಕರಣವಿಲ್ಲ. ನನ್ನ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಮೂಲಕ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.
ಅಧಿಕಾರಿಗಳ ಸಭೆ ನಡೆಸಲು ವಿರೋಧ ಪಕ್ಷದ ನಾಯಕರಿಗೆ ಅಧಿಕಾರವಿಲ್ಲ ಎಂದು ಮುಖ್ಯಮಂತ್ರಿ ಹೊರಡಿಸಿರುವ ಆದೇಶ ವಿರೋಧ ಪಕ್ಷದ ನಾಯಕನ ಹಕ್ಕುಚ್ಯುತಿಯಾಗಿದ್ದು, ಇದನ್ನೂ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ ಮತ್ತು ರಾಜ್ಯಪಾಲರ ಮುಂದೂ ಒಯ್ಯುತ್ತೇನೆ ಎಂದು ತಿಳಿಸಿದರು.
ನಾನು ವಿಧಾನಮಂಡಲದ ಸಾರ್ವಜನಿಕ ಲೆಕ್ಕ ಪರಿಶೀಲನಾ ಸಮಿತಿ ಅಧ್ಯಕ್ಷನಾಗಿದ್ದು ಮುಖ್ಯಕಾರ್ಯದರ್ಶಿಯನ್ನು ಕರೆದು ಮಾಹಿತಿ ಪಡೆಯುವ ಅಧಿಕಾರ ನನಗಿದೆ. ಮಾಹಿತಿ ಇಲ್ಲದೆ ಅಧಿವೇಶನದಲ್ಲಿ ಏನು ಮಾತನಾಡಲಿ, ಈ ಮಾಹಿತಿಯನ್ನು ಅಧಿಕಾರಿಗಳಿಂದ ಅಲ್ಲದೆ ಮಂತ್ರಿಗಳಿಂದ ಪಡೆಯಲು ಸಾಧ್ಯವೇ, ಮಾಹಿತಿ ಸಿಕ್ಕಿ ಬಿಟ್ಟರೆ ಸರ್ಕಾರಕ್ಕೆ ಕಷ್ಟ. ಅದಕ್ಕಾಗಿ ಈ ರೀತಿ ಆದೇಶ ಹೊರಡಿಸಿದ್ದಾರೆ. ಪಾರದರ್ಶಕ ಅಂದರೆ ಇದೇನಾ ಎಂದು ಪ್ರಶ್ನಿಸಿದರು. |