ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷನಾಗಿದ್ದಾಗ ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯೊಂದಕ್ಕೆ ಟೆಂಡರ್ ಕರೆಯದೆ ಗುತ್ತಿಗೆದಾರರೊಬ್ಬರಿಗೆ 100 ಕೋಟಿ ರೂ.ಗಳಿಗೆ ಗುತ್ತಿಗೆ ನೀಡಿ ಅವರಿಂದ ಯಡಿಯೂರಪ್ಪ 50 ಕೋಟಿ ರೂ. ಪಡೆದಿದ್ದಾರೆ ಎಂದು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷ ವರ್ತೂರ್ ಪ್ರಕಾಶ್ ಗಂಭೀರವಾಗಿ ಆರೋಪಿಸಿದ್ದಾರೆ.
ಇದಕ್ಕೆ ತಾವು ವಿರೋಧ ವ್ಯಕ್ತಪಡಿಸಿದರೂ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಳಿ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ ತಮ್ಮ ಅಧಿಕಾರ ದರ್ಪ ಪ್ರದರ್ಶಿಸಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಅಲ್ಲದೇ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ ಎಂಬ ವದಂತಿ ಕೇಳಿ ಬರುತ್ತಿದ್ದ ಹಿನ್ನಲೆಯಲ್ಲಿ, ತಾವು ಪಕ್ಷೇತರ ಶಾಸಕನಾಗಿ ಉಳಿಯುತ್ತೇನೆ ಹೊರತು ಸದ್ಯಕ್ಕೆ ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳು ನನಗೆ ರತ್ನ ಕಂಬಳಿ ಮೂಲಕ ಸ್ವಾಗತಿಸಲು ಸಜ್ಜಾಗಿವೆ. ಆದರೆ ಸದ್ಯಕ್ಕೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಲು ಸಿದ್ಧನಿಲ್ಲ. ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ನನ್ನ ನಾಯಕರು ಎಂದು ಘಂಟಾ ಘೋಷವಾಗಿ ಹೇಳುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಸ್ಥಿರ ಸರ್ಕಾರ ಬರಬೇಕು ಎನ್ನುವ ಉದ್ದೇಶದಿಂದ ಯಡಿಯೂರಪ್ಪನವರ ಸರ್ಕಾರಕ್ಕೆ ಬೆಂಬಲ ನೀಡಿದ್ದೆ. ಆದರೆ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿರುವ ರೆಡ್ಡಿ ಸಹೋದರರಿಗೆ ಹೆಚ್ಚು ಸಹಕಾರ ನೀಡುವ ಮೂಲಕ ತಮ್ಮ ಅಧಿಕಾರ ದಾಹವನ್ನು ಪ್ರದರ್ಶಿಸಿದ್ದಾರೆ ಎಂದು ತೀಕ್ಷ್ಣವಾಗಿ ಆರೋಪಿಸಿದ್ದಾರೆ. |