ರಾಜ್ಯದ 16ನೇ ರಾಜ್ಯಪಾಲರಾಗಿ ಕೇಂದ್ರದ ಮಾಜಿ ಸಚಿವ ಎಚ್.ಆರ್. ಭಾರದ್ವಾಜ್ ಸೋಮವಾರ ಸಂಜೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದ ರಾಮೇಶ್ವರ್ ಠಾಕೂರ್ ಅವರು ಮಧ್ಯ ಪ್ರದೇಶಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಠಾಕೂರ್ ಅವರ ಸ್ಥಾನಕ್ಕೆ ಭಾರದ್ವಾಜ್ ನೇಮಕಗೊಂಡಿದ್ದಾರೆ.
ಈ ನಡುವೆ ರಾಜಭವನದಲ್ಲಿ ರಾಜ್ಯಾಪಾಲ ರಾಮೇಶ್ವರ ಠಾಕೂರ್ ಅವರಿಗೆ ತುಂಬು ಹೃದಯದ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಪರವಾಗಿ ಠಾಕೂರ್ ಅವರಿಗೆ ಮೈಸೂರ ಪೇಟ ತೊಡಿಸಿ, ಶಾಲು ಹೊದಿಸಿ ಶುಭ ಕೋರಿದರು.
ಠಾಕೂರ್ ಅವರ ನಿರ್ಗಮನದ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ಮುಖಂಡರ ಗೈರು ಹಾಜರಿ ಎದ್ದುಕಾಣುತ್ತಿತ್ತು. ರಾಮೇಶ್ವರ್ ಠಾಕೂರ್ ಅವರು ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ಅವರ ಬೀಳ್ಕೊಡುಗೆಗೆ ಯಾವೊಬ್ಬ ಕಾಂಗ್ರೆಸ್ ಮುಖಂಡರು ಗೈರು ಹಾಜರಾಗಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. |