ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ಕೃಷ್ಣರಾಜ ಸಾಗರ ಸೇರಿದಂತೆ ಪ್ರಮುಖ ಜಲಾಶಯಗಳು ಖಾಲಿಯಾಗಿರುವ ಈ ಸಂದರ್ಭದಲ್ಲಿ ನೆರೆಯ ತಮಿಳುನಾಡಿನ 10 ಟಿಎಂಸಿ ನೀರಿನ ಬೇಡಿಕೆಯನ್ನು ಪೂರೈಸಲು ಅಸಾಧ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಳ್ಳಿ ಹಾಕುವ ಮೂಲಕ ಉಭಯ ರಾಜ್ಯಗಳ ನಡುವೆ ಮತ್ತೊಮ್ಮೆ ಕಾವೇರಿ ಕದನಕ್ಕೆ ಸಜ್ಜಾಗಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ತುಂಬಾ ಕಷ್ಟ ಎಂದು ನುಡಿದ್ದಾರೆ.
ಕಾವೇರಿ ಮಧ್ಯಂತರ ತೀರ್ಪಿನ ಅನ್ವಯ ತಮಿಳುನಾಡಿಗೆ ನೀರು ಬಿಡುವುದು ಅನಿವಾರ್ಯ. ಆದರೆ ಮಳೆ ಬಾರದೆ ಕೃಷ್ಣರಾಜ ಸಾಗರದಲ್ಲಿ ನೀರು ತುಂಬುವುದಿಲ್ಲ. ನೀರೇ ಇಲ್ಲದ ಕೃಷ್ಣರಾಜ ಸಾಗರದಿಂದ ನೀರು ಬಿಡುವುದು ಹೇಗೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಅವರು ಉತ್ತರಿಸಿದ್ದಾರೆ.
ಇಂತಹ ಪರಿಸ್ಥಿತಿ ತಮಿಳುನಾಡಿಗೆ ನೀರು ಬೀಡುವ ಪ್ರಶ್ನೆಯೇ ಇಲ್ಲ. ಪರಿಸ್ಥಿತಿ ಸುಧಾರಿಸಿದರೆ ಆ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಜೂನ್ ತಿಂಗಳ ತನ್ನ ಹಕ್ಕಿನ 10 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಈಗಾಗಲೇ ರಾಜ್ಯಕ್ಕೆ ಕೋರಿಕೆ ಸಲ್ಲಿಸಿದೆ. ಒಂದು ವೇಳೆ ಜಲಾಶಯಗಳು ಭರ್ತಿಯಾಗದಿದ್ದಲ್ಲಿ, ಕಾವೇರಿ ಕದನದ ಬಿಸಿ ಏರುವುದಂತೂ ಸತ್ಯ. |