ಚಿಂತನ ಮಂಥನ ಸಭೆಯಲ್ಲಿ ಶಿಕ್ಷಕರ ವರ್ಗಾವಣೆ, ಕೇಂದ್ರಕ್ಕೆ ನಿಯೋಗ, ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ. ಇಂತಹ ವಿಚಾರಗಳನ್ನು ಚರ್ಚಿಸುವುದಕ್ಕೆ 80 ಲಕ್ಷ ರೂ. ಖರ್ಚು ಮಾಡಿ ಜನರ ಕಂದಾಯದ ಹಣದಲ್ಲಿ ಮೋಜು ಮಾಡುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ಸೂಕ್ತ ವ್ಯಕ್ತಿಯಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ಸಭೆಯನ್ನು ನಡೆಸುವುದಕ್ಕಾಗಿಯೇ ವಿಧಾನಸೌಧ ವಿಕಾಸಸೌಧಗಳಿವೆ. ಇದೆಲ್ಲವನ್ನು ಬಿಟ್ಟು ರೆಸಾರ್ಟ್‌ನಲ್ಲಿ ಚಿಂತನ ಮಂಥನ ಸಭೆ ನಡೆಸುವ ಅಗತ್ಯವಾದರೂ ಏನಿತ್ತು? ಪಕ್ಷದ ಆಂತರಿಕ ಭಿನ್ನಮತ ಬಯಲಿಗೆ ಬರಬಹುದೆಂಬ ದೃಷ್ಟಿಯಿಂದ ರೆಸಾರ್ಟ್‌ನಲ್ಲಿ ಸಭೆ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಧಿಕಾರ ನಡೆಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸಚಿವರಿಗೂ ಅನುಭವದ ಕೊರತೆಯಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಸಂಘಟನೆಯ ಕೊರತೆಯಿಂದ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಹೀಗಾಗಿ ಸೋಲಿಗೆ ಒಬ್ಬ ವ್ಯಕ್ತಿಯನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. |