ವಿದ್ಯುತ್ ಪ್ರಸರಣ ಕಂಪೆನಿಗಳು ನಷ್ಟದಲ್ಲಿರುವುದರಿಂದ ವಿದ್ಯುತ್ ದರ ಹೆಚ್ಚಿಸುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುನ್ಸೂಚನೆ ನೀಡಿದ್ದಾರೆ.
ಕಳೆದ ವರ್ಷ 3ಸಾವಿರ ಕೋಟಿ ರೂ.ವಿದ್ಯುತ್ ಖರೀದಿ ಮಾಡಿದ್ದರಿಂದ ಎಲ್ಲ ವಿದ್ಯುತ್ ಪ್ರಸರಣ ಕಂಪೆನಿಗಳು ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ನಗರದ ಚಿತ್ರಕಲಾ ಪರಿಷತ್‌ನಲ್ಲಿ ಬೆಂಗಳೂರು ಪತ್ರಕರ್ತರ ಛಾಯಾಚಿತ್ರಗಾರರ ಸಂಘ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವ ಪ್ರಮಾಣದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಬೇಕು ಎನ್ನುವ ಕುರಿತಂತೆ ಅಧಿಕಾರಿಗಳ ಜತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಂದಿನ 2-3ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಇರುವುದರಿಂದ ವಿದ್ಯುತ್ ಸಮಸ್ಯೆ ತಲೆದೋರುವ ಸಾಧ್ಯತೆಗಳಿಲ್ಲ ಎಂದ ಅವರು, ಆನಂತರ ಅದರ ಪರಿಣಾಮ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. |