ಕೌಟುಂಬಿಕ ಮನಸ್ತಾಪವೆದ್ದು ವಿಚ್ಛೇದನ ಕೋರುವ ದಂಪತಿಗಳು ಮಗುವಿನ ಹೊಣೆ ತನಗೆ ಬೇಕೆಂದು ನ್ಯಾಯಾಲಯದಲ್ಲಿ ಕೋರುವುದನ್ನು ಕೇಳಿದ್ದೇವೆ. ಆದರೆ ಮಗಳ ಉಸಾಬರಿ ನಮಗೆ ಬೇಡ ಎಂದು ವಿಚ್ಛೇದಿತ ದಂಪತಿ ಕೋರ್ಟಿಗೆ ಅರ್ಜಿ ಸಲ್ಲಿಸಿದರೆ? ಇಂಥದ್ದು ಘಟಿಸಿದ್ದು ಬೆಂಗಳೂರಿನಲ್ಲಿ.
2000ದಲ್ಲಿ ಮನೆಯವರನ್ನು ಎದುರು ಹಾಕಿಕೊಂಡು ಪ್ರೀತಿಸಿ ಮದುವೆಯಾಗಿದ್ದ ನೆಲಮಂಗಲದ ಈ ದಂಪತಿಯ ದಾಂಪತ್ಯ ಜೀವನ ಸ್ವಲ್ಪ ಸಮಯದಲ್ಲೇ ಮುರಿದು 2004ರಲ್ಲಿ ಅವರಿಬ್ಬರೂ ಕೌಟುಂಬಿಕ ನ್ಯಾಯಾಲಯವೊಂದರಿಂದ ವಿಚ್ಛೇದನ ಪಡೆದಿದ್ದರು. ಆ ಹೊತ್ತಿಗೆ ಅವರಿಗೊಂದು ಹೆಣ್ಣು ಮಗುವಾಗಿತ್ತು.
ನಮಗೆ ಈ ಮಗುವಿನ ಹೊಣೆ ಬೇಡ ಎಂದು ವಿಚ್ಛೇದಿತ ಜೋಡಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರೇ ಅಚ್ಚರಿಗೊಂಡರು. ಅವರ ಮನವೊಲಿಸುವ ನ್ಯಾಯಾಧೀಶರ ಪ್ರಯತ್ನವೂ ವಿಫಲವಾಯಿತು. ಈ ದೂರವಾದ ದಂಪತಿಯ ಕುಟುಂಬಿಕರು ಕೂಡ ಆ ಮಗುವಿನ ಹೊಣೆ ಹೊತ್ತುಕೊಳ್ಳಲು ಇಷ್ಟ ಇಲ್ಲ ಎಂದು ಹೇಳಿದಾಗ ಆ ಮುಗ್ಧ ಮಗುವಿನ ಪರಿಸ್ಥಿತಿ ಹೇಗಿರಬಹುದು!
ಸಾಮಾನ್ಯವಾಗಿ ಮಗುವಿನ ಕಸ್ಟಡಿ ತಮಗೇ ಸಿಗಬೇಕೆಂದು ವಿಚ್ಛೇದಿತ ದಂಪತಿ ನ್ಯಾಯಾಲಯದಲ್ಲಿ ವಾದಿಸುವುದನ್ನು ಕಂಡಿದ್ದ ನ್ಯಾಯಮೂರ್ತಿಗಳಿಗೆ ಇದೊಂದು ಹೊಸಾ ಕೇಸು. ಕೊನೆಗೆ, ಮಗುವಿನ ಹೆಸರಿನಲ್ಲಿ ಇಬ್ಬರೂ ಕೂಡ ತಲಾ 10 ಲಕ್ಷ ರೂ. ಠೇವಣಿ ಇರಿಸಬೇಕು ಎಂದು ತೀರ್ಪು ನೀಡಿದ ನ್ಯಾಯಾಧೀಶರು, ವಿಚಾರಣೆಯನ್ನು ಮುಂದೂಡಿದ್ದಾರೆ. |