ನಗರದಲ್ಲಿ ಇದ್ದಾಗ ವಾರದಲ್ಲಿ ಮೂರು ದಿನ ಜನತಾ ದರ್ಶನ ಕಾರ್ಯಕ್ರಮ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರದಲ್ಲಿ ಮೂರು ದಿನ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 9 ರಿಂದ 10ಗಂಟೆಯವರೆಗೆ ಜನರ ದೂರುಗಳನ್ನು ಆಲಿಸುವ ನಿರ್ಧಾರವನ್ನು ಕೈಗೊಂಡಿರುವುದಾಗಿ ಹೇಳಿದರು.
ಆದರೆ ಬೆಂಗಳೂರಿನಿಂದ ಹೊರಗಿದ್ದ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಗರದಲ್ಲಿ ಇದ್ದಾಗ ಮಾತ್ರ ಜನರ ಸಮಸ್ಯೆಗಳನ್ನು ಆಲಿಸುವ ತೀರ್ಮಾನ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು ಎಂದು ವಿವರಿಸಿದರು.
ಅನಗತ್ಯ ವಿವಾದ ಬೇಡ: ಹೊಗೇನಕಲ್ ನೀರಾವರಿ ಯೋಜನೆ ಕುರಿತು ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಈ ಸಮಸ್ಯೆ ಕುರಿತು ಅನಗತ್ಯ ವಿವಾದ ಬೇಡ. ಆ ಬಗ್ಗೆ ಕಾನೂನು ಸಮ್ಮತವಾಗಿಯೇ ಸಮಸ್ಯೆ ಇತ್ಯರ್ಥಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. |