ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸ್ಥಳೀಯರ ವಿಶ್ವಾಸದೊಂದಿಗೆ ಉತ್ತರ ಕನ್ನಡದ ತದಡಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಈಶ್ವರಪ್ಪ, ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವ ಜಿಲ್ಲೆಗಳಿಗೆ 24 ಗಂಟೆಯೂ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಅಗತ್ಯವಿರುವ 105 ಮಿಲಿಯನ್ ಯೂನಿಟ್ ವಿದ್ಯುತ್ ಸದ್ಯ ಉತ್ಪಾದನೆಯಾಗುತ್ತಿದೆ. ಮಳೆ ಬರದಿದ್ದರೆ ಭೀಕರ ಪರಿಸ್ಥಿತಿ ಎದುರಾಗಬಹುದು. ಆ ಸಂದರ್ಭದಲ್ಲಿ ವಿದ್ಯುತ್ ಕೊರತೆ ನೀಗಿಸಲು 3000 ಕೋಟಿ ರೂ. ವೆಚ್ಚದಲ್ಲಿ ವಿವಿಧ ಮೂಲಗಳಿಂದ ವಿದ್ಯುತ್ ಖರೀದಿಸಲಾಗುವುದು ಎಂದು ತಿಳಿಸಿದರು.
ಏತನ್ಮಧ್ಯೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಮತ್ತೆ ತಲೆದೋರಿದೆ. ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಅನೇಕ ಬಾರಿ ಸರ್ಕಾರ ಹೇಳಿಕೊಂಡು ಬಂದಿದ್ದರೂ, ಅನಿಯಮಿತ ಲೋಡ್ ಶೆಡ್ಡಿಂಗ್ ಮುಂದುವರಿದೇ ಇದೆ. ವಿದ್ಯುತ್ ದರ ಏರಿಸುವತ್ತ ಸರ್ಕಾರ ಚಿಂತನೆ ನಡೆಸಿದೆ.
ಈ ಸಂಬಂಧ ವಿದ್ಯುತ್ ದರ ಪರಿಷ್ಕರಣೆಗೆ ಅನುಮತಿ ಕೋರಿ ರಾಜ್ಯದ ವಿದ್ಯುತ್ ವಿತರಣಾ ಸಂಸ್ಥೆಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಲಿದೆ. ನಗರ ಪ್ರದೇಶದ ಗ್ರಾಹಕರಿಗಿಂತ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ದರ ಏರಿಕೆ ಪ್ರಮಾಣ ಕಡಿಮೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. |