ಸರ್ಕಾರಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಎಸ್ಸೆಸ್ಸೆಲ್ಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದರೆ ಅಥವಾ ಪ್ರಥಮ ಭಾಷೆಯನ್ನು ಕನ್ನಡವಾಗಿ ಅಧ್ಯಯನ ನಡೆಸಿದ್ದರೆ ಅವರಿಗೆ ವಾರ್ಷಿಕವಾಗಿ ನೀಡುವ ಹೆಚ್ಚುವರಿ ಭತ್ಯೆಯನ್ನು ಖಾಸಗಿ ಅನುದಾನಿತ ಶಾಲೆಗಳಿಗೂ ವಿಸ್ತರಿಸುವಂತೆ ಹೈಕೋರ್ಟ್ ಮಂಗಳವಾರ ಸರ್ಕಾರಕ್ಕೆ ಆದೇಶಿಸಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ತಿಳಿಸಿದ್ದಾರೆ. ಕನ್ನಡ ಭಾಷೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಸರ್ಕಾರ 1987ರಿಂದ ಜಾರಿಗೆ ತಂದಿದೆ. ಈ ಯೋಜನೆ ಅಡಿ ಕೇವಲ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮಾತ್ರ ಭತ್ಯೆ ನೀಡುವ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ರಾಜ್ಯದ ವಿವಿಧೆಡೆಗಳ 572 ಶಿಕ್ಷಣ ಸಂಸ್ಥೆಗಳು ಕೋರ್ಟ್‌ನಲ್ಲಿ ದೂರಿದ್ದವು.
ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರು ಕೂಡ ಸರ್ಕಾರದಿಂದಲೇ ವೇತನ ಪಡೆಯುವ ಕಾರಣ ಈ ರೀತಿ ಭೇದಭಾವ ಮಾಡುವುದು ಸರಿಯಲ್ಲ ಎಂದು ಅವರು ಆರೋಪಿಸಿದ್ದರು.
ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರಿಗೂ ಹೆಚ್ಚುವರಿ ಭತ್ಯೆ ನೀಡಬೇಕು ಎಂದು ಮಾಡಿಕೊಂಡ ಮನವಿಯನ್ನು ಸರ್ಕಾರ 2005 ನವೆಂಬರ್ 10ರಂದು ತಿರಸ್ಕರಿಸಿದ್ದು, ಇದು ಸರಿಯಲ್ಲ ಎಂದು ಅರ್ಜಿದಾರರ ಪರ ವಾದಿಸಿದ ವಕೀಲ ಪ್ರಸನ್ನ ದೇಶಪಾಂಡೆ ನ್ಯಾಯಮೂರ್ತಿಗಳ ಗಮನ ಸೆಳೆದರು. ಈ ವಾದವನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು, ಸಮಾನ ವೇತನ ನೀಡುವಂತೆ ಸೂಚಿಸಿದರು. |