ಮಗ ಕದ್ದು ತಂದಿದ್ದನ್ನು ತಾಯಿ ಮಾರಾಟ ಮಾಡುವುದು, ಬಂದ ಹಣವನ್ನು ತಂದೆ ರಿಯಲ್ ಎಸ್ಟೇಟ್‌ನಲ್ಲಿ ಹೂಡುವುದು - ಇದು ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ಹಣ ಮಾಡುವ ವಂಚನೋದ್ಯಮ ಕುಟುಂಬದ 'ಫ್ಯಾಮಿಲಿ' ಪ್ಲಾನಿಂಗ್! ಇದರ ಪರಿಣಾಮ, ಈ ಕಳ್ಳರ 'ಉದ್ಯಮಿ' ಕುಟುಂಬದ ಬಳಿ 120 ಆಟೋ ರಿಕ್ಷಾಗಳು ಮತ್ತು ಎಕರೆಗಟ್ಟಲೆ ಭೂಮಿಯ ಒಡೆತನವಿದೆ!
ಇದು ಬೆಂಗಳೂರಿನ ಕಳ್ಳ ಉದ್ಯಮಿ ಕುಟುಂಬವೊಂದರ ಚುಟುಕು ಚರಿತ್ರೆ. 120 ಆಟೋ ರಿಕ್ಷಾಗಳು, ಒಂದು ಟಾಟಾ ಸುಮೋ ವಾಹನ, 15 ಕಟ್ಟಡಗಳು, ಮೈಸಿನಲ್ಲೊಂದು ಸೈಟು ಹಾಗೂ ಮಹಾರಾಷ್ಟ್ರದಲ್ಲಿ ಇಪ್ಪತ್ತೆಕರೆ ಮಾವಿನ ತೋಟ- ಇವಿಷ್ಟು ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರು ಈ ಚಿಕ್ಕ-ಚೊಕ್ಕ ಕುಟುಂಬ.
ಈ ಕಳ್ಳತನ-ಮಾರಾಟ-ಹೂಡಿಕೆ ತಂತ್ರ ಅನುಸರಿಸುವ 'ಉದ್ಯಮಿ' ಕುಟುಂಬದಲ್ಲಿ ಮಗ ಇಮ್ರಾನ್ (22) ಮತ್ತು ಆತನ ತಾಯಿ ಜರೀನಾ (45)ರನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದು, ಅಪ್ಪ, ಕೋಟ್ಯಧೀಶ ದಾದಾಪೀರ್ ತಲೆ ಮರೆಸಿಕೊಂಡಿದ್ದಾನೆ.
ಮೈಸೂರು ರಸ್ತೆಯ ವಾಲ್ಮೀಕಿ ನಗರ ನಿವಾಸಿಗಳಾಗಿರುವ ಈ ಕಳವು ಕುಟುಂಬದಿಂದ ಒಂದು ಕಿಲೋ ಚಿನ್ನಾಭರಣ, 14 ಕಿಲೋ ಬೆಳ್ಳಿ ಆಭರಣ ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು ಸುಮಾರು 25 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಹಲವಾರು ಕೇಸುಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ಕಳ್ಳತನ ನಡೆದ ಮನೆಗಳಲ್ಲಿ ದೊರೆತ ಬೆರಳಚ್ಚು ಆಧಾರದಲ್ಲಿ ಈ ಕಳ್ಳರನ್ನು ಸೆರೆಹಿಡಿಯಲಾಯಿತು ಎಂದು ಇನ್ಸ್‌ಪೆಕ್ಟರ್ ಗೋಪಾಲ್ ಕೆ.ಪಿ. ಹೇಳಿದ್ದಾರೆ. ಕೋಲಾರದ ಮುರುಗಮುಲ್ಲಾ, ಚಿಂತಾಮಣಿ, ರಾಮನಗರ ಮತ್ತು ಚನ್ನಪಟ್ಟಣ ಮುಂತಾದೆಡೆ ಪ್ರಸಿದ್ಧ ದರ್ಗಾಗಳ ಸಮೀಪ ಅವರು 15 ಕಟ್ಟಡಗಳನ್ನು ಹೊಂದಿದ್ದಾರೆ. ಪ್ರತಿಯೊಂದು ಊರಿನಲ್ಲಿಯೂ ಅವರು 15ರಿಂದ 20 ಆಟೋ ರಿಕ್ಷಾಗಳನ್ನು ಕೂಡ ಹೊಂದಿದ್ದರು ಎಂದಿರುವ ಪೊಲೀಸರು, ದಾದಾಪೀರ್ ಸೆರೆ ಸಿಕ್ಕಲ್ಲಿ ಮತ್ತಷ್ಟು ಮಾಹಿತಿಗಳು ದೊರೆಯುವ ಸಾಧ್ಯತೆಗಳಿವೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಕುಟುಂಬದ ಸಹಚರರಾಗಿದ್ದ ಅನ್ನಾ ಇಮ್ರಾನ್ ಮತ್ತು ಜಾಫರ್ ಎಂಬಿಬ್ಬರನ್ನು ತಿಂಗಳ ಹಿಂದೆಯೇ ಬಂಧಿಸಲಾಗಿತ್ತು. ಅವರಿಂದ 2 ಲಕ್ಷ ರೂ. ಮೌಲ್ಯದ ಕದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವರ ವಿಚಾರಣೆಯಿಂದ ಈ ಕುಟುಂಬ ಸೆರೆ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. |