ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಕಳಕಳಿಯನ್ನು ಮೈಗೂಡಿಸಿಕೊಳ್ಳುವಂತೆ ಹೊಸದಾಗಿ ನೇಮಕಗೊಂಡಿರುವ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರಿಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎಸ್.ಎಲ್.ದತ್ತು ಕಿವಿಮಾತು ಹೇಳಿದರು.
ಶಿಸ್ತು, ಸಮಯಪಾಲನೆಗೆ ಹೆಚ್ಚು ಒತ್ತು ನೀಡಿ, ಪಕ್ಷಬೇಧ ಮಾಡದೇ ಮುಕ್ತ ಮುನಸ್ಸಿನಿಂದ ನ್ಯಾಯದಾನ ಮಾಡುವಂತೆ ಅವರು ಕರೆ ನೀಡಿದರು.
ಕರ್ನಾಟಕ ನ್ಯಾಯಾಂಗ ಅಕಾಡೆಮಿ ವತಿಯಿಂದ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೊಸದಾಗಿ ನೇಮಕವಾಗಿರುವ 89 ಸಿವಿಲ್ ನ್ಯಾಯಾಧೀಶರ ತರಬೇತಿ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯವನ್ನು ದೇವಾಲಯವೆಂದು ಭಾವಿಸಿ, ದೇವರೆಂದು ನಿಮ್ಮ ಬಳಿ ಬರುವ ಜನರ ನಂಬಿಕೆಗೆ ಚ್ಯುತಿಬಾರದ ಹಾಗೆ ನೋಡಿಕೊಳ್ಳಿ ಎಂದು ಹೇಳಿದರು. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಕಳಕಳಿ, ಯಶಸ್ವಿ ನ್ಯಾಯಾಂಗ ಅಧಿಕಾರಿಗಳಿಗೆ ಇರಬೇಕಾದ ಮೂಲಗುಣ ಲಕ್ಷಣ, ಇವುಗಳನ್ನು ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಿ ಎಂದರು. |