ಬಹುಕಾಲದ ಬೇಡಿಕೆಯಾಗಿರುವ ಬೆಂಗಳೂರು-ಮಂಗಳೂರು ಹಗಲು ಹೊತ್ತಿನ ರೈಲು ಸಂಚಾರ ಆರಂಭಕ್ಕೆ ಬಲವಾದ ಸೂಚನೆ ದೊರೆತಿದ್ದು, ಈ ಭಾಗದ ಪ್ರಯಾಣಿಕರ ಕನಸು ನನಸಾಗುವ ಕಾಲ ಸನ್ನಿಹಿತವಾಗತೊಡಗಿದೆ.
ಬೆಂಗಳೂರು-ಮಂಗಳೂರು ಹಗಲು ಸಂಚಾರದ ರೈಲು ಆರಂಭಕ್ಕೆ ಸಂಬಂಧಿಸಿದಂತೆ 12ಮಂದಿ ನಿಯೋಗವೊಂದು ಮಂಗಳವಾರ ಹುಬ್ಬಳ್ಳಿ ನೈರುತ್ಯ ವಲಯದ ಜನರಲ್ ಮೆನೇಜರ್ ಕುಲದೀಪ್ ಚತುರ್ವೆದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಇನ್ನು ಎರಡು ತಿಂಗಳೊಳಗಾಗಿ ರೈಲು ಸಂಚಾರ ಆರಂಭವಾಗಲಿದೆ ಎಂಬ ಭರವಸೆ ನೀಡಿದ್ದಾರೆ.
ಆದರೆ ಬೆಂಗಳೂರು-ಮಂಗಳೂರು ಹಗಲು ಹೊತ್ತಿನ ರೈಲು ಸಂಚಾರಕ್ಕೆ ಶೀಘ್ರವೇ ಆರಂಭಿಸುವ ಕುರಿತು ಸಮಯ ನಿಗದಿಪಡಿಸುವುದು ಕಷ್ಟಸಾಧ್ಯ ಎಂಬುದಾಗಿಯೂ ಈ ಸಂದರ್ಭದಲ್ಲಿ ನಿಯೋಗಕ್ಕೆ ತಿಳಿಸಿದ್ದಾರೆ.
ನೈರುತ್ಯ ವಲಯ ರೈಲ್ವೆ ಪ್ರಯಾಣಿಕ ಸಮಾಲೋಚನಾ ಸಮಿತಿಯ ಸದಸ್ಯ ಪ್ರಕಾಶ್ ಮನ್‌ಡೊಂಥ್ ಹಾಗೂ ಬೆಂಗಳೂರು ಮೂಲದ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್(ಎಫ್‌ಕೆಸಿಸಿ)ನ ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯ ಸಮಿತಿಯ ಅಧ್ಯಕ್ಷರು ಸೇರಿದಂತೆ 12 ಜನರ ನಿಯೋಗ ಚತುರ್ವೆದಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು.
ಬೆಂಗಳೂರು-ಮಂಗಳೂರು ನಡುವಿನ ಹಗಲು ಸಂಚಾರದ ರೈಲು ಬಿಡುಗಡೆ ಸಂಬಂಧಿಸಿದ ಎಲ್ಲಾ ಕೆಲಸಗಳು ಮುಗಿದಿದ್ದು, ಆರಂಭಕ್ಕಾಗಿ ಇನ್ನು ನಾಲ್ಕು ದಿನಗಳೊಳಗಾಗಿ ರೈಲ್ವೆ ಮಂಡಳಿ ಮತ್ತು ರೈಲ್ವೆ ಸಚಿವಾಲಯದ ಹಸಿರು ನಿಶಾನೆಗಾಗಿ ಕಾಯುತ್ತಿರುವುದಾಗಿ ಚತುರ್ವೆದಿ ತಿಳಿಸಿದ್ದಾರೆಂದು ಪ್ರಕಾಶ್ ದಿ ಹಿಂದೂ ಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಬೆಂಗಳೂರು-ಮಂಗಳೂರು ಹಗಲು ಸಂಚಾರದ ರೈಲು ಆರಂಭಕ್ಕಾಗಿ ಉಡುಪಿ ರೈಲ್ ಯಾತ್ರಿ ಸಂಘದ ಆರ್.ಎಸ್.ಡಯಾಸ್, ಬೈಂದೂರು ರೈಲ್ ಯಾತ್ರಿ ಸಂಘದ ವೆಂಕಟೇಶ್ ಕಿಣಿ ಮತ್ತು ಪುತ್ತೂರಿನ ಟಿ.ಕೆ.ಭಟ್ ಸಾಕಷ್ಟು ಹೋರಾಟ ನಡೆಸಿದ್ದರು. ಇದೀಗ ತಮ್ಮ ಹೋರಾಟಕ್ಕೆ ಗೆಲುವು ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
|