ಜುಲೈ ಅಂತ್ಯದೊಳಗೆ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ವಾರ್ತಾ ಮತ್ತು ಅಬಕಾರಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಮೃತ ಮಹೋತ್ಸವ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಈ ವಿಷಯ ತಿಳಿಸಿದ್ದಾರೆ.
ಪತ್ರಕರ್ತರಿಗೆ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಜಾರಿಗೆ ತಂದಿದ್ದು, ಪತ್ರಕರ್ತರ ಪರಿಹಾರ ನಿಧಿ ಮೊತ್ತವನ್ನು 50 ಲಕ್ಷದಿಂದ 1 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪತ್ರಕರ್ತ ಭವನ ನಿರ್ಮಾಣಕ್ಕೆಂದು 3 ಕೋಟಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಆ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಹಾಗೆ ಹಿರಿಯ ಪತ್ರಕರ್ತರಾದ ಪಾಟೀಲ ಪುಟ್ಟಪ್ಪ ಅವರ ಬಗ್ಗೆ ಸಾಕ್ಷ್ಯಚಿತ್ರ ಹಾಗೂ ಟಿ.ಎಸ್.ಆರ್ ಪ್ರಶಸ್ತಿ ಪುರಸ್ಕೃತರ ಬಗ್ಗೆ ಕಿರುಚಿತ್ರ ಬಿಡುಗಡೆ ಮಾಡಲಾಗುವುದು ಎಂದ ಅವರು, ಪತ್ರಕರ್ತರು ಆತ್ಮಸಾಕ್ಷಿಗೊಪ್ಪುವಂತೆ ಸಮಾಜದ ಬದ್ಧತೆ ಹಾಗೂ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದರು. |