ರಾಜ್ಯದಲ್ಲೀಗ 2,300 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದ್ದು, ವಿದ್ಯುತ್ ಪರಿಸ್ಥಿತಿ ಕುರಿತು ಚರ್ಚಿಸಲು ನಗರದಲ್ಲಿ ಜು.6ರಂದು ಸಂಪುಟ ಉಪ ಸಮಿತಿ ಸಭೆ ಕರೆಯಲಾಗಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಮಳೆ ಅಭಾವದಿಂದಾಗಿ ಜಲ ವಿದ್ಯುದಾಗಾರಗಳಿಗಿಂತ ಉಷ್ಣ ವಿದ್ಯುತ್ ಸ್ಥಾವರಗಳಿಂದಲೇ ಹೆಚ್ಚಿನ ವಿದ್ಯುತ್ ಪಡೆಯಲಾಗುತ್ತಿದೆ. ರಾಯಚೂರು, ಬಳ್ಳಾರಿ ವಿದ್ಯುತ್ ಸ್ಥಾವರದಲ್ಲಿ ತಿಂಗಳಿಗಾಗುವಷ್ಟು ವಿದ್ಯುತ್ ಸಂಗ್ರಹ ಇದ್ದು, ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಶಿವಮೊಗ್ಗದಲ್ಲಿ ಹೇಳಿದ್ದರು.
ವಿದ್ಯುತ್ ಕೊರತೆ ಸಮಸ್ಯೆ ರಾಜ್ಯದಲ್ಲಷ್ಟೇ ಅಲ್ಲ, ದೇಶದ ಎಲ್ಲೆಡೆ ಇದೆ. ಹಾಗಾಗಿ ಲೋಡ್ ಶೆಡ್ಡಿಂಗ್ ಅನಿವಾರ್ಯ. ಆದರೆ, ಕೆಲ ತುರ್ತು ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ಕುರಿತು ಯಾವುದೇ ವೇಳಾಪಟ್ಟಿ ಘೋಷಿಸಿಲ್ಲ ಎಂದರು.
ಆದರೆ, ಈಗಾಗಲೇ ವಿದ್ಯುತ್ ಪ್ರಸರಣ ಕೇಂದ್ರ ಕಚೇರಿ ಎಲ್ಲ ಜಿಲ್ಲೆಗಳಿಗೆ ಲೋಡ್‌ಶೆಡ್ಡಿಂಗ್ ವೇಳಾಪಟ್ಟಿ ಕಳುಹಿಸಿದೆ. ನಗರದಲ್ಲಿ 3, ಗ್ರಾಮೀಣ ಪ್ರದೇಶದಲ್ಲಿ 11 ಗಂಟೆ ಲೋಡ್‌ಶೆಡ್ಡಿಂಗ್ ಮಾಡುವ ಕುರಿತ ಆದೇಶ ಕೋಲಾರ ಜಿಲ್ಲೆಗೆ ತಲುಪಿದೆ. |